ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಕೈಗಾದಿಂದ ಹೊರಟ ವಿದ್ಯುತ್ ಲೈನ್ ನಲ್ಲಿ ಭಾರಿ ಪ್ರಮಾಣದ ಬೆಂಕಿ ಕಂಡಿದ್ದು ಲೈನ್ ಸಮೀಪದ ಜನರು ಮನೆ ಖಾಲಿಮಾಡಿದ್ದಾರೆ.
ತಾಲೂಕಿನ ಮಾವಿನಮನೆ ಗ್ರಾ.ಪಂ ವ್ಯಾಪ್ತಿಯ ಬಾಸಲ್ ಸಮೀಪದ ವಾಗಳ್ಳಿ ಭಾಗದಲ್ಲಿ ಕೈಗಾ ಲೈನ್ ನಲ್ಲಿ ಮೂರ್ನಾಲ್ಕು ದಿನ ರಾತ್ರಿಯಿಂದ ನಿರಂತರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಯಾವ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂಬುದು ಸ್ಥಳೀಯರಿಗೆ ಗೊತ್ತಾಗಲಿಲ್ಲ. ನಿರಂತರವಾಗಿ 3-4 ದಿನಗಳ ಕಾಲ ಬೆಂಕಿ ಉರಿದಿದೆ. ಸುಮಾರು 240 ಮೆಗಾವ್ಯಾಟ್ ವಿದ್ಯುತ್ ಹರಿಯುವ ಲೈನ್ ಇದಾಗಿದ್ದು ಲೈನ್ ತುಂಡಾಗಿ ಬಿದ್ದರೆ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲವೂ ಸುಟ್ಟು ಕರಕಲಾಗುವ ಅಪಾಯವಿದೆ ಎಂಬುದನ್ನು ಜನ ತಿಳಿದುಕೊಂಡಿದ್ದರು.
ಗ್ರಾಮ ಲೆಕ್ಕಾಧಿಕಾರಿ ಈಶ್ವರ್ ಪಟಗಾರ ಮುಂಜಾಗೃತಾ ಕ್ರಮವಾಗಿ ಲೈನ್ ಸಮೀಪದ ಮನೆಗಳಿಂದ ಜನರನ್ನು ಹೊರ ಹೋಗುವಂತೆ ಸೂಚಿಸಿದರು. ಭಾರಿ ಮಳೆ ಸುರಿಯುತ್ತಿದ್ದರಿಂದ ಯಾವ ಅವಘಡ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ, ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ವಿನಂತಿಸಿದ್ದಾರೆ. ಕೈಗಾ ಅಧಿಕಾರಿಗಳನ್ನು ಸಂಪರ್ಕಿಸಿ ತ್ವರಿತವಾಗಿ ವಿದ್ಯುತ್ ನಿಲ್ಲಿಸುವಲ್ಲಿ ಈಶ್ವರ ಪಟಗಾರ್ ಯಶಸ್ವಿಯಾಗಿದ್ದಾರೆ. ನಂತರ ಕೈಗಾ ಅಧಿಕಾರಿಗಳು ಬಂದು ಲೈನ್ ಸರಿಪಡಿಸಿದ್ದಾರೆ.
ಕೈಗಾ ಲೈನ್ ನಿರ್ಮಿಸುವಾಗ ತೋಟದ ಬೆಳೆಗಳು ಲೈನ್ ಕೆಳಗಡೆ ಇದ್ದಲ್ಲಿ ಕಟಾವು ಮಾಡಿ ಪರಿಹಾರ ನೀಡಲಾಗಿದೆ. ಆದರೆ ಸಮೀಪದ ಮನೆಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ಸಮೀಪದ ಮನೆ ನಿರ್ಮಾಣಕ್ಕೆ ಯಾವುದೇ ನಿಯಮ ರೂಪಿಸಿಲ್ಲ. ಈ ಹಿಂದೆ ತಾಲೂಕಿನ ದೇಹಳ್ಳಿ ಸಮೀಪದಲ್ಲಿ ಲೈನ್ ತುಂಡಾಗಿ ಸುಮಾರು ಅರ್ಧ ಕಿ.ಮಿ. ಸಂಪೂರ್ಣ ಸುಟ್ಟು ಕರಕಲಾದ ಸಂಗತಿ ಕಣ್ಮುಂದೆ ಇದೆ. ಜನವಸತಿ ಪ್ರದೇಶದಲ್ಲಿ ಲೈನ್ ಗಳು ತುಂಡಾದರೆ ಜನರ ಜೀವದ ಪರಿಸ್ಥಿತಿ ಏನು ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇಂತಹ ಅವಘಡ ಸಂಭವಿಸಿದಾಗ ಯಾರಿಗೆ ಮಾಹಿತಿಯನ್ನು ನೀಡಬೇಕೆಂಬ ಸ್ಪಷ್ಟ ವಿಚಾರವನ್ನು ಕೈಗಾದವರು ತಿಳಿಸಬೇಕೆಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ.
——–
ಜನರ ಜೀವದ ಜೊತೆ ಯಾವುದೇ ಅಧಿಕಾರಿಗಳು ಆಟವಾಡದಿರಲಿ.ಈ ಸಮಸ್ಯೆಯ ಬಗ್ಗೆ ದೂರವಾಣಿ ಮೂಕಲ ಕೈಗಾ ಅಧಿಕಾರಿಗಳ ಗಮನಕ್ಕೆ ತಂದಾಗ ಇದು ಗ್ರೀಡ್ ನವರಿಗೆ ಸಂಭಂದಿಸಿದ್ದು ನಮಗೆ ಸಂಭಂದಿಸಿದ್ದಲ್ಲ ಎಂದು ಜಾರಿ ಕೊಳ್ಳುವ ಬದಲು ಸಂಭಂದಿಸಿದವರಿಗೆ ಮಾಹಿತಿ ನೀಡುವ ಕನಿಷ್ಟ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಕೈಗಾ ಅಧಿಕಾರಿಗಳು ಇಟ್ಟುಕೊಳ್ಳಲಿ ———–ಗ್ರಾಮಸ್ಥರು