ಸುದ್ದಿ ಕನ್ನಡ ವಾರ್ತೆ
ಶಿರಸಿ: ರಾಜ್ಯದಲ್ಲಿ ಆಡಳಿತವೇ ಇಲ್ಲ. ಕಾಂಗ್ರೆಸ್ ಪಕ್ಷ ಸರಕಾರದ ಮೂಲಕ ದ್ವೇಷ ಸಾಧಿಸುವ ಹತಾಶ ಸ್ಥಿತಿಗೆ ತಲುಪಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಟಿ ನಡೆಸಿ, ರಾಜ್ಯದಲ್ಲಿ ಆಡಳಿತ ಇಲ್ಲ ಎಂಬ ಸ್ಥಿತಿ ಇದೆ. ಸಿಎಂಗೆ ಆಡಳಿತದಲ್ಲಿ ಆಸಕ್ತಿ ಇಲ್ಲ. ಉಳಿದ ಸಚಿವರಿಗೆ ಜವಬ್ದಾರಿ ಇಲ್ಲ. ನಿರ್ಲಕ್ಷಿತ ಆಡಳಿತವಾಗಿದೆ. ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ. ಕಾನೂನು ಶಾಂತಿ ಸುವ್ಯವಸ್ಥೆ ಕುಸಿದಿದೆ. ದ್ವೇಷ ರಾಜಕಾರಣ ಬೆಳೆಯುತ್ತಿದೆ ಎಂದರು.
ಶಿರಸಿ ಇಸಳೂರಿನಲ್ಲಿ ಕೊಟ್ಟಿಗೆಯಲ್ಲಿದ್ದ ಮೂರು ದನ ಕದ್ದೋಯ್ದಿದ್ದಾರೆ. ಭಟಕಳ, ಹೊನ್ನಾವರದಲ್ಲಿ ಎಷ್ಟು ಘಟನೆ ಆಗಿದೆ ಎಂಬುದು ವರದಿಯಾಗಿದೆ. ಗೋವನ್ನು ಪವಿತ್ರ ಭಾವನೆಯಿಂದ ನೋಡುತ್ತಿದ್ದೇವೆ. ಆದರೆ, ಕಳ್ಳಸಾಗಣಿಕೆ ಆತಂಕ ಹೆಚ್ಚು ಮಾಡಿದೆ. ಅಲ್ಪ ಸಂಖ್ಯಾತರ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗುತ್ತಿದೆ. ಕೊಟ್ಟಿಗೆಯಲ್ಲಿನ ಆಕಳೂ ಕದ್ದೊಯ್ಯುವ ಧೈರ್ಯ ಕೊಡುವದು ಸರಕಾರ ನಮ್ಮದು ಅನ್ನಿಸುವಂತೆ ಆಗಿದೆ. ಪೊಲೀಸ್ ಇಲಾಖೆ ರಾಜ್ಯದಿಂದ ಇಲ್ಲೀ ತನಕ ಅಸಾಯಕವಾಗಿದೆ. ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಪುಢಾರಿಗಳ ಒತ್ತಡದಿಂದ ಕೆಲಸ ಮಾಡುತ್ತಿದ್ದರೆ ಅದು ನಿಮಗೇ ಅಪಾಯವಾಗಲಿದೆ. ಸರಕಾರದ ಹಸ್ತಕ್ಷೇಪ ಮಾಡುತ್ತಿರುವದೇ ಸಮಸ್ಯೆ ಎಂದರು.