ಸುದ್ದಿ ಕನ್ನಡ ವಾರ್ತೆ
ಶಿರಸಿ: ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ನಡೆಸುತ್ತಿರುವ ಆರ್ ಎನ್ ಎಸ್ ಕಂಪನಿ ಬೇಜವಬ್ದಾರಿ ಕಾಮಗಾರಿಗಳ ವಿರುದ್ಧ ಶಾಸಕ ಭೀಮಣ್ಣ ನಾಯ್ಕ ಆಕ್ಷೇಪ, ಅಸಮಧಾನ ವ್ಯಕ್ತಪಡಿಸಿ ಸ್ಥಳೀಯ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಭಿವೃದ್ಧಿ‌ ಕಾಮಗಾರಿ ನಿರ್ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರಕ್ಕೆ ಶನಿವಾರ ತಾಕೀತು ಮಾಡಿದರು.

ಶುಕ್ರವಾರ ತಾಲೂಕಿನ ಬಂಡಲ ಹಾಗೂ ರಾಗಿಹೊಸಳ್ಳಿ ನಡುವಿನ ನಿರ್ಮಾಣ ಹಂತದಲ್ಲಿ ಇರುವ ಬೆಣ್ಣೆ ಹಳ್ಳ ಸೇತುವೆ ಪಕ್ಕ ಹಾಕಲಾಗಿದ್ದ ತಾತ್ಕಾಲಿಕ ಸೇತುವೆ ಅತಿ‌ ಮಳೆಗೆ ತೊಳೆದು ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅವರು, ನಿರ್ಮಾಣ ಹಂತದಲ್ಲಿನ ಸೇತುವೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆಪಡೆದ ಕಂಪನಿ ಕಾರ್ಯ ಬೇಗ ಮುಗಿಸಲು ಅನುಕೂಲ ಆಗಲು ಆರು ತಿಂಗಳುಗಳ ಕಾಲ ಸಂಚಾರ ನಿರ್ಬಂಧವನ್ನು ಜಿಲ್ಲಾಡಳಿತದಿಂದ ಹೇರಲಾಗಿತ್ತು. ಆದರೂ ಕೆಲಸ ವೇಗವಾಗಿ ಮಾಡಲಾಗುತ್ತಿಲ್ಲ ಎಂದು ಅಸಮಧಾನಿಸಿದರು.

ಈ ಮಾರ್ಗದಲ್ಲಿ ಹಲವರು ಸಂಚಾರ ನಿರ್ಬಂಧ ಬೇಡ ಎಂದರೂ ಕೆಲಸ ಬೇಗ ಆಗಲಿ ಎಂದು ಎಲ್ಲರನ್ನೂ ಎದುರು ಹಾಕಿಕೊಂಡು ಸಂಚಾರ ನಿರ್ಬಂಧ ಮಾಡಿಸಿದೆವು. ಈಗ ಏನು ಉತ್ತರ ಕೊಡೋಣ ಅವರಿಗೆಲ್ಲ ಎಂದು ಹರಿಹಾಯ್ದ ಶಾಸಕರು,
ಕೇವಲ ಬೆಣ್ಣೆಹೊಳೆ ಸೇತುವೆ ಅಲ್ಲ, ಉಳಿದ ಚಳ್ಳೆ ಹಳ್ಳ, ಮೊಸಳೆಗುಂಡಿ, ಚಂಡಮುರಕನಹಳ್ಳ ಸೇತುವೆಗಳ ಕಾಮಗಾರಿಯೂ ಹಾಗೇ ಇದೆ. ಸಮಯ ಕೊಟ್ಟರೂ ಅವಧಿಯೊಳಗೆ ಪೂರ್ಣ ಮಾಡಿಲ್ಲ ಎಂದರೆ ಇಷ್ಟೊಂದು ದೊಡ್ಡ ಗುತ್ತಿಗೆ ಸಂಸ್ಥೆ ಆಗಿಯೂ ಹೀಗಾದರೆ ಹೇಗೆ ಎಂದೂ ಕೇಳಿದರು.

ಬುಧವಾರದಿಂದ ಬೆಣ್ಣೆಹೊಳೆ ಸೇತುವೆ ಲಘು ವಾಹನಗಳಿಗೆ ತೆರವು ಮಾಡುವದಾಗಿ ಆರ್ ಎನ್ ಎಸ್ ಇಂಜನೀಯರ್ ನಿತಿನ್, ವಿಶ್ವನಾಥ ಶೇಟ್ ಶಾಸಕರ ಪ್ರಶ್ನೆಗೆ ಪ್ರತಿಕ್ರಿಯೆ‌ ನೀಡಿದಾಗ ಶಾಲೆಗಳು ಆರಂಭವಾದ ಬಳಿಕವೂ ಆ ಮಕ್ಕಳಿಗೆ ಕೂಡ ತೊಂದರೆ ಆಗಬಾರದು. ಆ ಬಗ್ಗೆ ಕೂಡ ಈಗಿನಿಂದಲೇ ಲಕ್ಷ್ಯ ಹಾಕಬೇಕು, ರೈತರಿಗೆ, ಕಾರ್ಮಿಕರಿಗೆ ರಾಗಿಸಹೊಳ್ಳಿ, ಬಂಡಲ‌ ಸಂಪರ್ಕ ಸಮಸ್ಯೆ ಆಗದಂತೆ ಕೂಡ ನೋಡಿಕೊಳ್ಳಬೇಕು. ರೇಷನ್ ತರಲೂ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಸ್ಥಳದಲ್ಲಿದ್ದ ಎಸಿ ಕಾವ್ಯಾರಾಣಿ ಕೆ. ಹಾಗೂ ವಾಯುವ್ಯ ಸಾರಿಗೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಈ ವೇಳೆ ಎಸಿ ಕಾವ್ಯರಾಣಿ, ಪ್ರಮುಖರಾದ ಎಸ್.ಕೆ.ಭಾಗವತ್, ಪ್ರವೀಣ ಗೌಡ, ದೇವರಾಜ‌ ಮರಾಠಿ, ಗಜಾನನ ನಾಯ್ಕ, ಗಂಗಾಧರ ಗೌಡ ಇತರರು ಇದ್ದರು‌.

ಸಂಪರ್ಕ ಕಡಿತ
ಶಿರಸಿ ಕುಮಟಾ ಮಾರ್ಗದಲ್ಲಿ ಬೆಣ್ಣೆಹೊಳೆ ತಾತ್ಕಾಲಿಕ ಸೇತುವೆ ಕೊಚ್ಚಿಹೋದ ಕಾರಣದಿಂದ ಶಿರಸಿ ಕುಮಟಾ ಮಾರ್ಗ ಸಂಪರ್ಕ ಕಡಿತವಾಗಿದೆ. ಜೊತೆಗೆ ಹೆಬ್ರೆ ಹಾಗೂ ರಾಗಿಹೊಸಳ್ಳಿ, ಮುಂಡಗಾರು, ದೇವಿಮನೆ ಗ್ರಾಮಗಳಿಗೆ ಬಂಡಲ, ಶಿರಸಿ ಕಡಿತವಾಗಿದೆ.