ಸುದ್ದಿಕನ್ನಡ ವಾರ್ತೆ
Goa : ಮೇ 24, ಶನಿವಾರ ಕೇರಳಕ್ಕೆ ಮಾನ್ಸೂನ್ ಆಗಮಿಸಿದೆ. ಈ ಕುರಿತಂತೆ ಹವಾಮಾನ ಇಲಾಖೆ ಅಧಿಕೃತ ಘೋಷಣೆ ಮಾಡಿದೆ. ಸಾಮಾನ್ಯವಾಗಿ ಜೂನ್ 1 ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸುತ್ತದೆ, ಆದರೆ ಪ್ರಸಕ್ತ ವರ್ಷ, ಮುಂಗಾರು ಎಂಟು ದಿನ ಮುಂಚಿತವಾಗಿ ಕೇರಳಕ್ಕೆ ಆಗಮಿಸಿದೆ. ಇದಕ್ಕೂ ಮೊದಲು, 2009 ರಲ್ಲಿ, ಮೇ 23 ರಂದು ಮಾನ್ಸೂನ್ ಕೇರಳಕ್ಕೆ ಆಗಮಿಸಿತ್ತು. ಹವಾಮಾನ ಅನುಕೂಲಕರವಾಗಿದ್ದರೆ, ಮುಂದಿನ ನಾಲ್ಕೈದು ದಿನಗಳಲ್ಲಿ ಮಾನ್ಸೂನ್ ಕೇರಳದಿಂದ ಮುನ್ನಡೆದು ಗೋವಾವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮೊದಲೇ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆಯೇ ಅನುಕೂಲಕರ ವಾತಾವರಣ ಮುಂದುವರೆದಲ್ಲಿ ಗೋವಾಕ್ಕೆ ಜೂನ್ 1 ರಂದು ಮಾನ್ಸೂನ್ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಹವಾಮಾನ ಇಲಾಖೆಯು ಮೇ 27 ರಂದು ಕೇರಳಕ್ಕೆ ಮುಂಗಾರು ಆಗಮಿಸಲಿದೆ ಎಂದು ಮೊದಲೇ ಊಹಿಸಿತ್ತು. ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ವಾಯುಭಾರ ಕುಸಿತ ಮತ್ತು ಬಂಗಾಳಕೊಲ್ಲಿಯಲ್ಲಿನ ವಾತಾವರಣದ ಬದಲಾವಣೆಗಳು ಮುಂಗಾರು ಮುನ್ನಡೆಯನ್ನು ವೇಗಗೊಳಿಸುವ ಸಾಧ್ಯತೆಯಿದೆ. ಇಂದು ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ನಾಲ್ಕು ದಿನಗಳವರೆಗೆ ಯಲ್ಲೊ ಅಲರ್ಟ ಎಚ್ಚರಿಕೆಯನ್ನು ನೀಡಲಾಗಿದ್ದು, ಮೇ 25 ರಿಂದ 28 ರವರೆಗೆ ಗೋವಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.