ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದಲ್ಲಿ ಕನ್ನಡಿಗರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಗೋವಾದಲ್ಲಿ ಕನ್ನಡ ಶಾಲೆಗಳಲ್ಲಿ ಇರುವ ಕುಂದುಕೊರತೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಪರಿಹಾರ ಕಲ್ಪಿಸಿಕೊಡುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ರವರ ಬಳಿ ಗೋವಾದ ವಿವಿಧ ಕನ್ನಡ ಸಂಘಟನೆಗಳ ನಿಯೋಗ ಮನವಿ ಮಾಡಿದೆ.

ಗೋವಾದಲ್ಲಿ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಂತೆಯೇ ಗೋವಾದಲ್ಲಿರುವ ಕನ್ನಡ ಶಾಲೆಗಳು ಕೂಡ ಹಲವು ಸಮಸ್ಯೆ ಹಾಗೂ ಕುಂದು ಕೊರತೆ ಎದುರಿಸುತ್ತಿವೆ. ಕೆಲ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಇದರಿಂದಾಗಿ ಗೋವಾದಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಗತ್ಯ ನೆರವು ನೀಡಬೇಕು ಎಂದು ಗೋವಾದ ಕನ್ನಡ ಸಂಘಟನೆಗಳ ಪ್ರಮುಖರು ಮನವಿ ಮಾಡಿದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಳು ಗೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೋವಾದ ಕನ್ನಡ ಸಂಘಟನೆಗಳು ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ರಾಷ್ಟ್ರೀಯ ಬಂಜಾರ ಪರಿಷತ್ ಉಪಾಧ್ಯಕ್ಷ ಹಾಗೂ ಅಖಿಲ ಗೋವಾ ಬಂಜಾರ ಸಮೀತಿಯ ಅಧ್ಯಕ್ಷ ಸುರೇಶ್ ರಜಪೂತ್, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿ ಪಡದಯ್ಯ ಹಿರೇಮಠ, ಕಸಾಪ ದಕ್ಷಿಣ ಗೋವಾ ಸಾಲಸೇಟ್ ತಾಲೂಕ ಘಟಕದ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಈರಪ್ಪ ಹೊತಗಣ್ಣವರ್ ಮತ್ತಿತರರು ಉಪಸ್ಥಿತರಿದ್ದು ಮನವಿ ಮಾಡಿದರು.