ಸುದ್ದಿ ಕನ್ನಡ ವಾರ್ತೆ
ಶಿರಸಿ: ಹುರಿದ ಅಡಿಕೆ ಆಮದಿನ ಮೇಲೆ ತೆರಿಗೆ ವಿಧಿಸಿ ಅಡಿಕೆ ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ಮುಂದಡಿಯಿಟ್ಟ ಕೇಂದ್ರ ಸರಕಾರಕ್ಕೆ ಇಲ್ಲಿನ ಅಡಿಕೆ ಬೆಳೆಗಾರರ ಸಂಸ್ಥೆ ಟಿಎಸ್ ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯದ ವಿವಿಧ ಮಾರಾಟ ಸಹಕಾರ ಸಂಘಗಳು ಸೇರಿ ಹುರಿದ (ರೋಸ್ಟೆಡ್) ಅಡಿಕೆಯನ್ನು ಮೌಲ್ಯವರ್ಧಿತ ತೆರಿಗೆಯಡಿಯಲ್ಲಿ ತರಬೇಕೆಂದು ಕೋರಿಕೊಂಡ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರವು ಕಳೆದ ಏ.೨ ರಂದು ಅಡಿಕೆ ಬೆಳೆಗಾರರಿಗೆ ಸಮಾಧಾನವನ್ನು ತರುವಂತಹ ಅಧಿಸೂಚನೆಯೊಂದನ್ನು ಹೊರಡಿಸಿದೆ ಎಂದಿದ್ದಾರೆ.
ಈ ಹಿಂದೆ ರೋಸ್ಟೆಡ್ ಅಡಿಕೆಯು ಇತರೇ ರೋಸ್ಟೆಡ್ ನಟ್ ಇತರೇ ಸೀಡ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಸಂಪೂರ್ಣ ತೆರಿಗೆ ರಹಿತವಾಗಿ ಭಾರತಕ್ಕೆ ಆಮದಾಗುತ್ತಿತ್ತು. ಈ ಅಧಿಸೂಚನೆಯ ಪ್ರಕಾರ ರೋಸ್ಟೆಡ್ ಅಡಿಕೆಯನ್ನು ಈಗ “ಅಡಿಕೆ-ಇತರೇ” ತೆರಿಗೆ ಶೀರ್ಷಿಕೆಯಡಿಯಲ್ಲಿ ತರಲಾಗಿದೆ ಎಂದಿದ್ದಾರೆ.
ಇನ್ನು ಪ್ರತಿ ಕೆ.ಜಿ ಅಡಿಕೆಗೆ ಸಿ.ಐ.ಎಫ್ ದರವು (ವೆಚ್ಚ, ವಿಮೆ, ಸರಕು ಸಾಗಣೆ ಶುಲ್ಕ) ೩೫೧ ರೂ. ಹಾಗೂ ಅದಕ್ಕೂ ಮೇಲ್ಪಟ್ಟಲ್ಲಿ ಮಾತ್ರ ಆಮದು ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸಾಮಾನ್ಯವಾಗಿ ಈ ರೋಸ್ಟೆಡ್ ಅಡಿಕೆಯ ಆಮದು ವೆಚ್ಚವು ಸಿ.ಐ.ಎಫ್ ದರದ ಮಿತಿಯೊಳಗೆ ಬರುವುದರಿಂದ ಬಹುತೇಕ ಆಮದಾಗುವ ಎಲ್ಲಾ ರೋಸ್ಟೆಡ್ ಅಡಿಕೆಯು ನಿಗದಿಪಡಿಸಿದ ತೆರಿಗೆ ಮಿತಿಗೆ ಒಳಪಡಲಿದೆ. ಇದರಿಂದಾಗಿ ವಿದೇಶಿ ರೋಸ್ಟೆಡ್ ಅಡಿಕೆಯ ಖರೀದಿ ವೆಚ್ಚವು ಸ್ಥಳೀಯ ಅಡಿಕೆಗೆ ಹೋಲಿಸಿದಾಗ ಹೆಚ್ಚಳವಾಗುವುದರಿಂದ ಸ್ಥಳೀಯ ಅಡಿಕೆ ಬೆಳೆಗೆ ಖರೀದಿದಾರರಿಂದ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳು ಇವೆ ಎಂದಿದ್ದಾರೆ. ಇದರ ಮುಂದುವರೆದ ಪರಿಣಾಮವು ಸಧ್ಯದ ಅಡಿಕೆ ಮಾರುಕಟ್ಟೆಯಲ್ಲಿ ಪ್ರತಿಫಲಿತವಾಗಿದ್ದು, ಅಡಿಕೆ ದರದಲ್ಲಿ ಹೆಚ್ಚಳವಾಗಿರುವುದನ್ನು ಬೆಳೆಗಾರರರು ಗಮನಿಸಬಹುದಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.
ಆಮದಿನ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ತೆಗೆದುಕೊಂಡ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ ಪಿಯೂಷ್ ಗೋಯಲ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಇನ್ನಿತರ ಅಡಿಕೆ ಬೆಳೆಗಾರರ ಕ್ಷೇತ್ರದ ಸಂಸದರುಗಳು ಹಾಗೂ ಸಂಬಂಧಪಟ್ಟ ಕೇಂದ್ರ ಸರಕಾರದ ಇಲಾಖೆಯ ಉನ್ನತ ಅಧಿಕಾರಿಗಳನ್ನು ಅಭಿನಂದಿಸುವದಾಗಿ ವೈದ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.