ಸುದ್ದಿಕನ್ನಡ ವಾರ್ತೆ
Goa (ಮಾಪ್ಸಾ): ಅಂಗದ್-ಮಾಪ್ಸಾದ ಹಳೆಯ ಮಾರುಕಟ್ಟೆಯಲ್ಲಿರುವ ಅಲಂಕಾರ್ ಥಿಯೇಟರ್ ಬಳಿಯ ಕಟ್ಟಡದಲ್ಲಿರುವ ಪ್ರಿನ್ಸ್ ಚಡ್ಡಾ ಅವರ ‘ವೀ ಕೇರ್ 24/7’ ಸೂಪರ್ ಮಾರ್ಕೆಟ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಶುಕ್ರವಾರ ಬೆಳಗಿನ ಜಾವ 4:30 ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಂಕಿ ಅವಘಡದಲ್ಲಿ ಇಡೀ ಅಂಗಡಿ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

ಆರಂಭದಲ್ಲಿ ಮಾರುಕಟ್ಟೆಯ ಹಿಂಭಾಗದಿಂದ ಬೆಂಕಿ ಹರಡಿತು. ಇಬ್ಬರು ಅಂಗಡಿಯ ನೌಕರರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ ಅದು ಹೊತ್ತಿ ಉರಿಯಿತು ಮತ್ತು ಇಡೀ ಸರಕು ಸುಟ್ಟುಹೋಯಿತು. ನೌಕರರು ಹೊರಗೆ ಓಡಿ ತಮ್ಮ ಪ್ರಾಣ ಉಳಿಸಿಕೊಂಡರು ಎಂಬ ಮಾಹಿತಿ ಲಭ್ಯವಾಗಿದೆ.

ದಿನಸಿ, ಸೌಂದರ್ಯವರ್ಧಕಗಳು, ತಂಪು ಪಾನೀಯಗಳು, ಲೇಖನ ಸಾಮಗ್ರಿಗಳು, ಕಂಪ್ಯೂಟರ್‍ಗಳು, ಹವಾನಿಯಂತ್ರಣ ವ್ಯವಸ್ಥೆಗಳು, ಅಂಗಡಿಗಳ ಒಳಾಂಗಣ ಮತ್ತು ಕೌಂಟರ್‍ಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಅಂಗಡಿಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೂ ಬೆಂಕಿ ತಗುಲಿತು. ಸುಮಾರು 60 ಲಕ್ಷ ರೂ. ಮೌಲ್ಯದ ಸರಕುಗಳನ್ನು ಮಾರಾಟಕ್ಕೆ ಇಡಲಾಗಿತ್ತು, ಅವುಗಳಲ್ಲಿ ಹೆಚ್ಚಿನವು ಸುಟ್ಟು ಭಸ್ಮವಾಗಿವೆ.

ಮಾಪ್ಸಾ ಅಗ್ನಿಶಾಮಕ ದಳದ ಅಧಿಕಾರಿ ಗಣೇಶ್ ಗೋವೇಕರ್, ಕಾನ್‍ಸ್ಟೆಬಲ್ ವಿಷ್ಣು ಗವಾಸ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.