ಸುದ್ದಿ ಕನ್ನಡ ವಾರ್ತೆ

ಶಿರಸಿ : ಹಿಂದೂ ಪೈರ್ ಬ್ರಾಂಡ್ , ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವುದು ತಪ್ಪು. ಕೇಂದ್ರದ ನಾಯಕರು ಈ ಕುರಿತು ಮರು ಪರಿಶೀಲನೆ ಮಾಡಲಿ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಕುರಿತು ನೇರ ಮಾತುಗಳನ್ನಾಡುವ ಯತ್ನಾಳ ಅವರಿಂದ ಪಕ್ಷಕ್ಕೆ ಮುಜುಗುರ ಆಗಿರಬಹುದು. ಆದರೆ ಅವರ ಉಚ್ಚಾಟ‌ನೆ ಹಿಂಪಡೆದು ಹಿಂದುತ್ವದ ಪರವಾಗಿ ಬಿಜೆಪಿ ಪಕ್ಷ ನಿಲ್ಲುವಂತೆ ಮಾಡಬೇಕು ಎಂದರು.

ಕಾಂಗ್ರೆಸ್ ಸ್ವಾತಂತ್ರ ಬಂದಾಗಿನಿಂದಲೂ ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಮುಸ್ಲಿಂ ತುಷ್ಠೀಕರಣ ಕಾಂಗ್ರೆಸ್ ನ ಒಂದು ಭಾಗ. ಅದು ಹೊಸದಲ್ಲ. ಆದರೆ ಗುತ್ತಿಗೆಯಲ್ಲಿ ಶೆ.೪ ರಷ್ಟು ಮೀಸಲಾತಿ ನೀಡಿರುವುವುದು ಸಂವಿಧಾನ ವಿರೋಧಿ. ಅದು ಕಾನೂನಾತ್ಮಕವಾಗಿ ನಿಲ್ಲುವುದಿಲ್ಲ ಎಂದು ತಿಳಿದಿದ್ದರೂ ಕಾಂಗ್ರೆಸ್ ಜಾರಿಗೆ ತಂದಿದೆ. ಇದೊಂದು ನಾಟಕೀಯ ನಡೆಯಾಗಿದೆ ಎಂದ ಅವರು, ರಾಷ್ಟ್ರದ ಹಿತ ಮೀರಿ ತುಷ್ಠೀಕರಣ ಮಾಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನಲ್ಲಿರುವ ಹಿಂದೂಗಳ ಕುಟುಂಬವೂ ಉಳಿಯುವುದಿಲ್ಲ. ಭಯೋತ್ಪಾದಕರನ್ನು, ದೇಶ ದ್ರೋಹಿಗಳನ್ನು ಬೆಳೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರ ಸೌಗತ್ ಎ ಮೋದಿ ಹೆಸರಿನಲ್ಲಿ ರಂಜಾನ್ ಗಾಗಿ 32 ಲಕ್ಷ ಕಿಟ್ ಕೊಟ್ಟಿರುವುದನ್ನು ನಾನು ವಿರೋಧಿಸುತ್ತೇನೆ. ಈ ಹಿಂದೆ ಅಜ್ಮೀರ್ ದರ್ಗಾಕ್ಕೂ ಪ್ರಧಾನಿ ಮೋದಿ ಚಾದರ್ ಕಳಿಸಿದ್ದರು. ಅದನ್ನೂ ಖಂಡಿಸುತ್ತೇವೆ. ಬಿಜೆಪಿಯವರೂ ತುಷ್ಠೀಕರಣದತ್ತ ವಾಲುತ್ತಿದೆ ಎಂದು ಅನಿಸುತ್ತಿದೆ. ಬಿಜೆಪಿಯವರ ಯೋಜನೆ, ಯೋಚನೆ ಏನಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಹಿಂದುತ್ವಾದಿಗಳನ್ನು ಕಡೆಗಣಿಸುತ್ತಿರುವುದೂ ಸಹ ಮುಂದಿನ ದಿನಗಳಲ್ಲಿ ಅಪಾಯ. ಇದನ್ನು ಬಿಜೆಪಿಯ ಕೇಂದ್ರ ಮತ್ತು ರಾಜ್ಯದವರು ಅರ್ಥ ಮಾಡಿಕೊಳ್ಳಬೇಕು. ಲೂಟಿಕೋರರು, ಭ್ರಷ್ಟರನ್ನಾ ಶುದ್ಧ ಬಿಜೆಪಿಯ ಒಳಗಡೆ ಬಿಟ್ಟುಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಅಶೋಕ ಹಾಸ್ಯಗಾರ, ಡಾ. ಎಲ್.ಜಿ.ಧರ್ಮಶಾಲಾ, ನವೀನ ಶೆಟ್ಟಿ, ಹೇಮಾ ಹೆಬ್ಬಾರ, ಕೆ.ವಿ.ಭಟ್ಟ ಇತರರು ಇದ್ದರು.
ಇದೇ ವೇಳೆ ಲವ್ ಜಿಹಾದ್ ಕುರಿತಾಗಿ ಶ್ರೀರಾಮ ಸೇನೆಯಿಂದ ಪ್ರಕಟ ಮಾಡಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.