ಸುದ್ದಿ ಕನ್ನಡ ವಾರ್ತೆ
ಶಿರಸಿ: ಸ್ಥಳೀಯ ಹಿಲ್ಲೂರು ಯಕ್ಷಮಿತ್ರ ಬಳಗದ ಮೂರನೇ ವರ್ಷದ ವಾರ್ಷಿಕ ಸಮ್ಮೇಳನದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪ್ರದಾನ, ಗೌರವ ಸನ್ಮಾನ, ತಾಳಮದ್ದಲೆ, ಯಕ್ಷಗಾನ, ಭಾವ-ವಲ್ಲರಿ ಎಂಬ ಕಾರ್ಯಕ್ರಮಗಳನ್ನು ಮಾ.೩೧ ಸೋಮವಾರ ಇಳಿಹೊತ್ತು ೩.೩೦ ರಿಂದ ಶಿರಸಿ ಟಿ.ಎಂ.ಎಸ್ ಸಭಾಭವನದಲ್ಲಿ ಸಂಘಟಿಸಲಾಗಿದೆ.
ಅಂದು ನಡೆಯುವ ಸಮ್ಮೇಳನದಲ್ಲಿ ವಾರ್ಷಿಕವಾಗಿ ನೀಡಲ್ಪಡುವ ಹಿಲ್ಲೂರು ಯಕ್ಷಮಿತ್ರ ಬಳಗದ ಪ್ರಶಸ್ತಿಯನ್ನು ಪ್ರಾಚಾರ್ಯ ಹಾಗೂ ಯಕ್ಷಗಾನ ರಂಗದ ಹಿರಿಯ ಭಾಗವತ ಕೆ.ಪಿ.ಹೆಗಡೆ ಗೊಳಗೋಡ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಗೌರವ ಸಮ್ಮಾನವನ್ನು ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ನೆರವೇರಿಸಲಾಗುತ್ತಿದೆ. ಪ್ರೋತ್ಸಾಹಕ ಸಮ್ಮಾನವಾಗಿ ಗೋ ಸಂರಕ್ಷಕ ರವಿಚಂದ್ರ ಹನುಮಂತ ಗೌಳಿ ಮರಾಠಿಕೊಪ್ಪ ಅವರಿಗೆ ಪುರಸ್ಕರಿಸಲಾಗುತ್ತಿದೆ.

ವಾರ್ಷಿಕೋತ್ಸವ ಅಂಗವಾಗಿ ಮಧ್ಯಾಹ್ನದಲ್ಲಿ ಆರಂಭಿಕವಾಗಿ ಶಿರಸಿ ಲಯನ್ಸ್ ಶಾಲಾ ವಿದ್ಯಾರ್ಥಿಗಳಿಂದ “ನಚಿಕೇತ” ಎಂಬ ತಾಳಮದ್ದಲೆ ನಡೆಯಲಿದ್ದು, ಭಾಗವತರಾಗಿ ತುಳಗೇರಿ ಗಜಾನನ ಭಟ್ಟ ಹಾಗೂ ಮದ್ದಲೆ ವಾದನದಲ್ಲಿ ಅನಿರುದ್ಧ ವರ್ಗಾಸರ ಪಾಲ್ಗೊಳ್ಳಿದ್ದಾರೆ. ತದನಂತರ ನಡೆಯುವ “ಭಾವ-ವಲ್ಲರಿ” ಕಾರ್ಯಕ್ರಮವು ಬಹುಮುಖ ಕಲಾವಿದ ರವಿ ಮುರೂರು ಸಾರಥ್ಯದಲ್ಲಿ ಆಯೋಜನೆಗೊಂಡಿದ್ದು, ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ಬೆಣ್ಣೆಮನೆ ಸಹಕರಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಶಿರಸಿ ಟಿ.ಎ.ಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಭೀಮಣ್ಣ ನಾಯ್ಕ ನೆರವೇರಿಸಲಿದ್ದಾರೆ. ಅಭ್ಯಾಗತರಾಗಿ ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಉದ್ಯಮಿ ಉಪೇಂದ್ರ ಪೈ, ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಜಿ.ಭಾಗ್ವತ, ಯಲ್ಲಾಪುರ ಟಿ.ಎಂ.ಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ, ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಲಯನ್ಸ್ ಎಜ್ಯುಕೇಶನ್ ಸೊಟೈಟಿ ಅಧ್ಯಕ್ಷ ಪ್ರಭಾಕರ ಹೆಗಡೆ ಭಾಗವಹಿಸಲಿದ್ದು, ಅಭಿನಂದನಾ ನುಡಿಯನ್ನು ಪ್ರಸಂಗಕರ್ತ ಪ್ರೋ.ಪವನ ಕಿರಣಕರೆ ಮಾಡಲಿದ್ದಾರೆ.
ಬಳಿಕ ಕವಿ ದೇವಿದಾಸ ರಚಿಸಿದ ಪೌರಾಣಿಕ ಪ್ರಸಂಗ “ದಕ್ಷಯಜ್ಞ” ಯಕ್ಷಗಾನ ಪ್ರದರ್ಶಿತಗೊಳ್ಳಲಿದ್ದು, ಭಾಗವತರಾಗಿ ರವೀಂದ್ರ ಭಟ್ಟ ಅಚವೆ ಹಾಗೂ ರಾಮಕೃಷ್ಣ ಹೆಗಡೆ ಹಿಲ್ಲೂರ ಮತ್ತು ಮದ್ದಲೆ ವಾದನದಲ್ಲಿ ಪರಮೇಶ್ವರ ಭಂಡಾರಿ ಕರ್ಕಿ, ಅನಿರುದ್ಧ ವರ್ಗಾಸರ, ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಲವಳ್ಳಿ ಪಾಲ್ಗೊಳ್ಳಲಿದ್ದಾರೆ.

ಮುಮ್ಮೇಳದ ಪಾತ್ರದಾರಿಗಳಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಸಿದ್ದಾಪುರ ಅಶೋಕ ಭಟ್ಟ, ಬಿಳಿಯೂರ ಸಂಜಯ, ಹೊಸಪಟ್ಟಣ ಚಂದ್ರಹಾಸ ಗೌಡ, ಹಿಲ್ಲೂರು ಮಂಜುನಾಥ, ಹಾಸ್ಯದಲ್ಲಿ ಚಪ್ಪರಮನೆ ಶ್ರೀಧರ ಹೆಗಡೆ, ಸ್ತ್ರೀವೇಶದಲ್ಲಿ ಕೊಂಡದಕುಳಿ ಅಶ್ವಿನಿ ಮತ್ತು ದೀಪಕ ಕುಂಕಿ ಭಾಗವಹಿಸಲಿದ್ದು, ಸಂಪೂರ್ಣ ಉಚಿತವಾದ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಹಿಲ್ಲೂರು ಯಕ್ಷಮಿತ್ರ ಬಳಗದ ಮುಖ್ಯಸ್ಥ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.