ಸುದ್ದಿ ಕನ್ನಡ ವಾರ್ತೆ
ಮಹಾಲಿಂಗಪುರ : ಪ್ರತಿಭೆಯ ಚಿನ್ನ ಬಡತನದ ಕುಲುಮೆಯಲ್ಲೇ ಹುಟ್ಟುತ್ತದೆ ಎಂಬ ಮಾತಿಗೆ ಸಾಕ್ಷಿ ಎಂಬಂತೆ ಬಡ ಕೂಲಿಕಾರನ ಮಗಳು ಪಿಯುಸಿಯಲ್ಲಿ ಪ್ರಥಮ ಮತ್ತು ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದು ಪಾಲಕರನ್ನು ಪಾವನಗೊಳಿಸಿದ್ದಾಳೆ.
ಮಹಾಲಿಂಗಪುರದ ಹಟಗಾರ ನೇಕಾರ ಸಮಾಜದ ಬಡ ಕೂಲಿಕಾರ ಸಂಗಪ್ಪ ಮಂಟೂರ ಎಂಬಾತ ತನ್ನ ೪ ಜನ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾನೆ. ಅವರ ಪೈಕಿ ಲಕ್ಷ್ಮೀ ಮಂಟೂರ ಪಿಯುಸಿ ಸೈನ್ಸ್ ಮತ್ತು ನೀಟ್ ಪರೀಕ್ಷೆ ಪಾಸಾಗಿ ವೈದ್ಯಳಾಗುವ ಉತ್ಕಟ ಆಸೆ ಇಟ್ಟುಕೊಂಡಿದ್ದಾಳೆ. ಆದರೆ ಆಕೆಯ ಕನಸಿಗೆ ಬಡತನ ಅಡ್ಡಿಯಗುತ್ತಿರುವುದು ವಿಷಾದಕರ ಸಂಗತಿ.
ಲಕ್ಷ್ಮೀ ಮಂಟೂರ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೯೭ ಅಂಕ ಪಡೆದಾಗ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುವಾಗ ಉಪನ್ಯಾಸಕರು ಹಣಕಾಸಿನ ನೆರವು ನೀಡಿದ್ದರು. ಅದರ ಪ್ರಯೋಜನ ಪಡೆದ ಲಕ್ಷ್ಮೀ ಕಳೆದ ವರ್ಷ ಪಿಯುಸಿ ಶೇ.೯೪ ಅಂಕ ಪಡೆದು ಪಾಸಾಗಿದ್ದಳು. ನಂತರ ನೀಟ್ ಪರೀಕ್ಷೆ ಬರೆದು ೯೭೫೦೪ನೇ ರ‍್ಯಾಂಕ್ ಪಡೆದರು. ವೈದ್ಯಳಾಗುವ ಆಸೆಯಿಂದ ಎಂಬಿಬಿಎಸ್ ಮಾಡಲು ಹಣಕಾಸಿನ ಕೊರತೆ ಉಂಟಾಗಿದೆ.
ಲಕ್ಷಾಂತರ ರೂ. ಶುಲ್ಕ ಕೇಳಿ ದಂಗಾದ ಪಾಲಕ ತನ್ನ ಮಗಳ ಕಲಿಕೆಯ ಆಸೆ ಯಾವತ್ತೂ ಕಮರಬಾರದೆಂದು ದುಡಿದದ್ದನ್ನೆಲ್ಲಾ ಸುರಿದು, ಸಾಲ ತಂದು ಶುಲ್ಕ ಭರಿಸಲು ಹೆಣಗಾಡುತ್ತಿದ್ದಾರೆ. ಅವರ ಪರದಾಟ ಕಂಡು ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಿಯು ಕಾಲೇಜ್ ಪ್ರಾಚಾರ್ಯ ಎಲ್.ಬಿ.ತುಪ್ಪದ ೧೦ ಸಾವಿರ ರೂ. ಸಹಾಯಧನ ನೀಡಿದ್ದಾರೆ. ಅಲ್ಲದೇ ಈ ಹಿಂದೆ ಆ ಬಾಲಕಿಯ ಶಿಕ್ಷಣಕ್ಕೆ ನೆರವಾಗಿದ್ದ ಉಪನ್ಯಾಸಕ ಆರ್.ಎನ್.ಪಟ್ಟಣಶೆಟ್ಟಿ ತನ್ನ ಮನೆಗೆ ತಂದೆ-ಮಗಳನ್ನು ಕರೆಸಿ ಮತ್ತೆ ೫೦ ಸಾವಿರ ರೂ. ಚೆಕ್ ನೀಡಿ ಪ್ರೋತ್ಸಾಹಿಸಿದ್ದಾರೆ.
ಆದರೆ ದುಬಾರಿ ಮೆಡಿಕಲ್ ಶಿಕ್ಷಣ ಪೂರ್ಣವಾಗಲು ಮತ್ತು ನಿರಂತರ ಬರುವ ಖರ್ಚು ನಿಭಾಯಿಸಲು ಅವರ ಆದಾಯ ಸಾಕಾಗುವುದಿಲ್ಲ. ಎಲ್ಲಾ ಅನುಕೂಲವಿದ್ದರೂ ಹೆಣ್ಣು ಮಕ್ಕಳ ಶಿಕ್ಷಣ ಅರ್ಧಕ್ಕೇ ಮೊಟಕುಗೊಳಿಸುವ ಪಾಲಕರ ಮಧ್ಯೆ ಬಡತನದಲ್ಲೂ ಮಗಳ ಆಶಯಕ್ಕೆ ತಕ್ಕಂತೆ ಶಿಕ್ಷಣ ಕೊಡಿಸಲು ಹೋರಾಟ ಮಾಡುತ್ತಿರುವ ಪಾಲಕನಿಗೆ ನೆರವಿನ ಹಸ್ತ ಬೇಕಾಗಿದೆ. ಆಕೆಯ ಶಿಕ್ಷಣಕ್ಕೆ ಸ್ವ ಇಚ್ಚೆಯಿಂದ ಸಹಾಯ ಸಲ್ಲಿಸುವವರು ಮೋ.೯೬೦೬೦೯೩೦೫೮ ಸಂಖ್ಯೆಗೆ ಕರೆ ಮಾಡಬಹುದು. ವಿದ್ಯಾರ್ಥಿನಿಯ ಬ್ಯಾಂಕ್ ಖಾತೆ ಸಂಖ್ಯೆ: (ಕೆನರಾ ಬ್ಯಾಂಕ್) ೦೮೭೩೨೨೧೦೦೦೦೨೬೭ ಗೆ ಹಣ ವರ್ಗಾವಣೆ ಮಾಡಬಹುದು.