ಸುದ್ದಿಕನ್ನಡ ವಾರ್ತೆ

ಪಣಜಿ: ವಿಘ್ನಹರ್ತ ಗಣರಾಯನ ಆಗಮನಕ್ಕೆ ಗೋವಾ ರಾಜ್ಯಾದ್ಯಂತ ಗಣೇಶ ಭಕ್ತರು ಸಿದ್ಧತೆ ಆರಂಭಿಸಿದ್ದು, ರಾಜ್ಯದ ಮಾರುಕಟ್ಟೆಗಳನ್ನು ವಿನೂತನ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿದೆ. ಭಕ್ತರು ಕೂಡ ಶಾಪಿಂಗ್‍ಗಾಗಿ ಮಾರುಕಟ್ಟೆಗೆ ಬರುತ್ತಿದ್ದಾರೆ; ಆದರೆ ಭಾರೀ ಮಳೆಯಿಂದಾಗಿ ಖರೀದಿಗೆ ತೊಂದರೆಯಾಗಿದೆ. ಇದರಿಂದ ವ್ಯಾಪಾರಸ್ಥರು, ಅಂಗಡಿಕಾರರು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದಾರೆ. ಮತ್ತೊಂದೆಡೆ ಚಿತ್ರಶಾಲೆಗಳಲ್ಲಿ ಗಣೇಶ ಮೂರ್ತಿಗಳಿಗೆ ಬಣ್ಣ ಬಳಿಯುವ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ರಾತ್ರಿಯಿಡಿ ಗಣೇಶ ಮೂರ್ತಿಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ಶಿಲ್ಪಿಗಳು ನಿರತರಾಗಿದ್ದಾರೆ.

ಗಣೇಶ ಚತುರ್ಥಿ ಗೋವಾ ರಾಜ್ಯದ ಅತಿ ದೊಡ್ಡ ಹಬ್ಬ. ಭಕ್ತರು ಪ್ರೀತಿಯ ಬಪ್ಪನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಉತ್ಸವಕ್ಕೆ ಇನ್ನು 2 ದಿನ ಮಾತ್ರ ಬಾಕಿಯಿದ್ದು, ಗಣರಾಯನ ಆಗಮನಕ್ಕೆ ಭಕ್ತರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮನೆ ಮನೆ ಸ್ವಚ್ಛತೆ, ಬಣ್ಣ ಬಳಿಯುವುದು, ಅಲಂಕಾರ, ಆಕರ್ಷಣೀಯ ದೃಶ್ಯಾವಳಿಗಳನ್ನು ರಚಿಸುವುದು ಇತ್ಯಾದಿ ಕಾರ್ಯಗಳೂ ಆರಂಭಗೊಂಡಿವೆ. ಗಣೇಶ ಹಬ್ಬಕ್ಕೆ ಆಕರ್ಷಕ ಅಲಂಕಾರಕ್ಕೆ ರೆಡಿಮೇಡ್‍ಗೆ ಜನರು ಒತ್ತು ನೀಡುತ್ತಿದ್ದಾರೆ. ಹಾಗಾಗಿ ನೂರಾರು ಸಿದ್ಧ ಮಖರ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಮಹಿಳೆಯರೂ ಸಿಹಿತಿಂಡಿ ತಯಾರಿಕೆಯಲ್ಲಿ ತೊಡಗಿದ್ದಾರೆ.

ಭಕ್ತರಾದ ವಿನಾಯಕ ಶಿರೋಡ್ಕರ್ ಮಾತನಾಡಿ, ರಾಜ್ಯದ ಎಲ್ಲಾ ಮಾರುಕಟ್ಟೆಗಳ ಅಂಗಡಿಗಳಲ್ಲಿ ವಿಶಿಷ್ಟ ಮಾದರಿಯ ಮಖರ್ ಮತ್ತು ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿದ್ದು ಭಕ್ತರು ಅವುಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಪೂಜೆಗೆ ಕುಳಿತುಜಕೊಳ್ಳುವ ಮಣೆ, ಮಾಟೋಲಿ, ಚೌರಂಗ ಸೇರಿದಂತೆ ಉತ್ತಮ ಕೆತ್ತನೆಯ ವಸ್ತುಗಳು ,ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು. .

ಸೆಪ್ಟಂಬರ್ ತಿಂಗಳು ಆರಂಭವಾಗಿದ್ದು, ಇದೀಗ ಮಳೆಯ ತೀವ್ರತೆ ಕಡಿಮೆಯಾಗಿ ಮತ್ತೆ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಾರಂಭಿಸಿದ್ದು, ನಿನ್ನೆ ಭಾರೀ ಮಳೆ ಸುರಿದಿದೆ. ಇದರಿಂದ ಗಣೇಶ ಚತುರ್ಥಿ ಖರೀದಿಗೂ ಆತಂಕ ಶುರುವಾಗಿದೆ. ಈ ವರ್ಷ ಅತಿವೃಷ್ಟಿಯಿಂದಾಗಿ ಪಣಜಿ ನಗರದಲ್ಲಿ ನಡೆದ ಅಷ್ಟಮಿ ಜಾತ್ರೆಗೆ ಹಾನಿಯಾಗಿದೆ. ಇಡೀ ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಗಣೇಶ ಚತುರ್ಥಿ ಹಬ್ಬಕ್ಕೂ ತೊಂದರೆಯಾಗುವ ಆತಂಕ ಎದುರಾಗಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸೆ.4ರಿಂದ 7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ವ್ಯಾಪಕ ಮುಂಗಾರು ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದ್ದು, ರಾಜ್ಯದ ಎಲ್ಲ ಕಡೆ ಭಾರಿ ಮಳೆಯಾಗಲಿದೆ ಎಂದು ಹೇಳಿದೆ. ಸದ್ಯ ಅರಬ್ಬಿ ಸಮುದ್ರದ ಭಾಗದಲ್ಲಿ ಮೋಡ ಕವಿದಿದ್ದು, ರಾಜ್ಯದಲ್ಲಿ ಮಳೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಇದುವರೆಗೆ ರಾಜ್ಯದಲ್ಲಿ ದಾಖಲೆಯ ಮಳೆಯಾಗಿದೆ. ಸೋಮವಾರದಂದು ರಾಜಧಾನಿ ಪಣಜಿ, ಮಡಗಾಂವ್ ಸೇರಿದಂತೆ ವಿವಿದೆಡೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ತೊಂದರೆ ಉಂಟಾಗಿತ್ತು.