ಸುದ್ದಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯವು ತನ್ನ ಸುಂದರ ಕಡಲ ತೀರಗಳು ಮತ್ತು ಪ್ರಸಿದ್ಧ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮವು ಗೋವಾ ರಾಜ್ಯದ ಪ್ರಮುಖ ಉದ್ಯಮವಾಗಿದೆ. ಸಾಮಾನ್ಯವಾಗಿ ಗೋವಾ ಕರಾವಳಿ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ.

ಪ್ರವಾಸೋದ್ಯಮವು ಗೋವಾ ರಾಜ್ಯದ ಆರ್ಥಿಕತೆಯ ಬೆನ್ಮೆಲುಬಾಗಿದೆ. ಗೋವಾ ರಾಜ್ಯವು ಪಶ್ಚಿಮ ಕರಾವಳಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಇದೆ. ಗೋವಾವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ.

ಗೋವಾ ರಾಜ್ಯವು ಬೋಂಡ್ಲಾ ವನ್ಯಜೀವಿ ಅಭಯಾರಣ್ಯ, ಭಗವಾನ್ ಮಹಾವೀರ ಅಭಯಾರಣ್ಯ, ಮೋಲೆಮ್ ರಾಷ್ಟ್ರೀಯ ಉದ್ಯಾನವನ, ಕೋತಿಗಾಂವ ವನ್ಯಜೀವಿ ಅಭಯಾರಣ್ಯ, ಮಹಾದಾಯಿ ವನ್ಯಜೀವಿ ಅಭಯಾರಣ್ಯ, ನೇತ್ರಾವಳಿ ವನ್ಯಜೀವಿ ಅಭಯಾರಣ್ಯ ವನ್ನೊಳಗೊಂಡಂತೆ ಗೋವಾ ರಾಜ್ಯವು ಶ್ರೀಮಂತ ಜೀವ ವೈವಿಧ್ಯತೆಯನ್ನು ಹೊಂದಿದೆ.

ಗೋವಾದ ಕಾಡುಗಳಲ್ಲಿ ನರಿಗಳು, ಕಾಡುಹಂದಿಗಳು, ವಲಸೆ ಪಕ್ಷಿಗಳು ಕಂಡುಬರುತ್ತವೆ. ಪಕ್ಷಿಧಾಮಗಳಲ್ಲಿ ಮಿಂಚುಳ್ಳಿಗಳು, ಮೈನಾ ಹಕ್ಕಿಗಳು, ಗಿಳಿಗಳು ಒಳಗೊಂಡಿವೆ. 310 ಮೀಟರ್ ಎತ್ತರದ ಭಾರತದ ಐದನೇಯ ಅತಿ ಎತ್ತರದ ಜಗತ್ಪ್ರಸಿದ್ಧ ದೂಧಸಾಗರ ಜಲಪಾತವು ಗೋವಾ-ಕರ್ನಾಟಕ ಗಡಿಯಲ್ಲಿರುವ ಮಹಾವೀರ ಅಭಯಾರಣ್ಯದಲ್ಲಿದೆ.

ಪ್ರಸಿದ್ಧ ಅಲೀಂ ಅಲಿ ಪಕ್ಷಿಧಾಮವು ಚೋರಾವ್ ಧ್ವೀಪದಲ್ಲಿದೆ. ಅಳಿವಿನಂಚಿನಲ್ಲಿರುವ ಆಲಿವ್ ರಿಡಲೆ ಆಮೆಯನ್ನು ಗೋವಾದ ಪೆಡ್ನೆಯಲ್ಲಿರುವ ಮೋರ್ಜಿ ಬೀಚ್ ಮತ್ತು ದಕ್ಷಿಣ ಗೋವಾದ ಕಾಣಕೋಣದ ಗಾಲಜೀಬಾಗ್ ಬೀಚ್ ನಲ್ಲಿ ಕಾಣಬಹುದಾಗಿದೆ.

ಗೋವಾದ ಮತ್ತೊಂದು ಪ್ರಮುಖ ಪ್ರವಾಸಿ ಆಕರ್ಷಣೆಯೆಂದರೆ ಪಾರಂಪರಿಕ ಮನೆಗಳು 450 ವರ್ಷಗಳಿಗೂ ಹೆಚ್ಚು ಕಾಲ ಪೋರ್ಚುಗೀಸ್ ವಸಾಹತುಶಾಹಿ ಆಡಳಿತದ ಪರಂಪರೆಯಾಗಿರುವ ಭವ್ಯ ಮನೆಗಳಲ್ಲಿ ಕೆಲವು ಹೋಟೆಲ್ ಗಳಾಗಿ ಪರಿವರ್ತನೆಗೊಂಡಿವೆ. ಇನ್ನೂ ಕೆಲವು ಮನೆಗಳಲ್ಲಿ ಜನರು ವಾಸಿಸುತ್ತಾರೆ.
ಭಾರತದ ಎಲ್ಲ ರಾಜ್ಯಗಳಲ್ಲಿ ಅತ್ಯಂತ ಚಿಕ್ಕ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ನಾಲ್ಕನೇಯ ಅತಿ ಚಿಕ್ಕ ರಾಜ್ಯವಾಗಿದೆ. ಭಾರತದ ರಾಜ್ಯಗಳಲ್ಲಿ ಎರಡನೇಯ ಅತಿ ಹೆಚ್ಚು ತಲಾವಾರು ಜಿಡಿಪಿ ಹೊಂದಿದೆ. ಇಡೀ ದೇಶದ ತಲಾವಾರು ಜಿಡಿಪಿ ಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ.

ಪಣಜಿಯು ಗೋವಾ ರಾಜ್ಯದ ರಾಜಧಾನಿಯಾಗಿದ್ದರೆ, ವಾಸ್ಕೊ-ಡ-ಗಾಮ ಅತಿ ದೊಡ್ಡ ನಗರವಾಗಿದೆ. ಗೋವಾ ರಾಜ್ಯದಲ್ಲಿ ಬೀಚ್ ಗಳು, ದೇವಸ್ಥಾನಗಳು, ಚರ್ಚಗಳು, ಜಲಪಾತಗಳು, ಪ್ರಮುಖ ಆಕರ್ಷಣೆಯಾಗಿದೆ. ಗೋವಾ ರಾಜ್ಯವು ಒಂದು ಪುಟ್ಟ ರಾಜ್ಯವಾಗಿದ್ದರೂ ಕೂಡ ದೇಶ-ವಿದೇಶಿಯ ಪ್ರವಾಸಿಗರನ್ನು ಆಕರ್ಷಿಸುವ ರಾಜ್ಯವಾಗಿದೆ. ಪ್ರತಿ ದಿನ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶೀಯ ಪ್ರವಾಸಿಗರು ಆಗಮಿಸುವುದು ವಿಶೇಷವಾಗಿದೆ.