ಸುದ್ದಿ ಕನ್ನಡ ವಾರ್ತೆ

ಜೇವರ್ಗಿ :ಅನಾದಿಕಾಲದಿಂದಲೂ ನಮ್ಮ ರಾಜ ಮಹಾರಾಜರು ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತು ಸಂವರ್ಧನೆಗಾಗಿ ಅತ್ಯಂತ ಶ್ರೇಷ್ಠವಾದಂತಹ ಭಾರತಾದ್ಯಂತ ಸಾವಿರಾರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು. ಈ ದೇವಸ್ಥಾನಗಳ ಮಾಧ್ಯಮದಿಂದ ನಡೆಯುತ್ತಿದ್ದ ಗುರುಕುಲ, ವೇದ ಪಾಠಶಾಲೆ, ಗೋಶಾಲೆಗಳ ಮೂಲಕ ರಾಷ್ಟ್ರ,ಧರ್ಮ ಮತ್ತು ಸಂಸ್ಕೃತಿಯ ಪ್ರಚಾರ ಕಾರ್ಯವು ವ್ಯಾಪಕವಾಗಿ ನಡೆಯುತ್ತಿತ್ತು ಮತ್ತು ನಮ್ಮ ದೇವಸ್ಥಾನಗಳೇ ಸನಾತನ ಹಿಂದೂ ಧರ್ಮದ ಆಧಾರ ಸ್ತಂಭಗಳಾಗಿದ್ದವು, ಆದರೆ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಜಾತ್ಯಾತೀತ ವ್ಯವಸ್ಥೆಯ ಪ್ರಭಾವದಿಂದ ನಮ್ಮ  ದೇವಸ್ಥಾನಗಳ ಸ್ಥಾಪನೆಯ ಮೂಲ ಉದ್ದೇಶವೂ ಅರ್ಥವನ್ನು ಕಳೆದುಕೊಳ್ಳಲು ಪ್ರಾರಂಭವಾಯಿತು.  ದೇವಸ್ಥಾನಗಳನ್ನು ಸರಕಾರೀಕರಣ ಮಾಡುವ ಮೂಲಕ ಅಲ್ಲಿ ಬರುವ ಆದಾಯವನ್ನು ವಶಪಡಿಸಿಕೊಳ್ಳುವುದಲ್ಲದೆ, ಅವುಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡುವ ಮೂಲಕ ಹಿಂದೂ ಧರ್ಮದ ಮೂಲ ಆಧಾರ ಸ್ತಂಭವನ್ನು  ನಾಶ ಮಾಡುವಂತಹ ಷಡ್ಯಂತ್ರ ಪ್ರಾರಂಭವಾಯಿತು. ಹಿಂದೂ ಧರ್ಮದ ಆಧಾರ ಸ್ಥಂಭವಾದ  ದೇವಸ್ಥಾನಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು 2016 ರಲ್ಲಿ ಮಂದಿರ ಮಹಾ ಸಂಘವನ್ನು ಪ್ರಾರಂಭ ಮಾಡಿದ್ದು ಈ ಮಹಾಸಂಘದ ಮಾಧ್ಯಮದಿಂದ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ದೇವಸ್ಥಾನ ಸಂರಕ್ಷಣೆ ದೃಷ್ಟಿಯಿಂದ ಅನೇಕ ಯಶಸ್ವಿ ಅಭಿಯಾನಗಳನ್ನು ನಡೆಸಲಾಗುತ್ತಿದೆ, ಕಳೆದ 2 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ  ದೇವಸ್ಥಾನ ವಿಶ್ವಸ್ಥರು , ಪುರೋಹಿತರು ಮತ್ತು ಈ ಕ್ಷೇತ್ರದಲ್ಲಿ ಕಾರ್ಯ ಮಾಡುವ ವಕೀಲರನ್ನು ಸೇರಿಸಿ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಮಂದಿರ ಅಧಿವೇಶನವನ್ನು ನಡೆಸಲಾಗುತ್ತಿದೆ.

ಈ ಅಧಿವೇಶನದ ಮಾಧ್ಯಮದಿಂದ ದೇವಸ್ಥಾನಗಳ ವ್ಯಾಪಕ ಸಂಘಟನೆ, ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುವುದು, ಸಾಮೂಹಿಕ ಆರತಿ, ವಸ್ತ್ರ ಸಂಹಿತೆ ಜಾರಿ ಮಾಡುವುದು, ದೇವಸ್ಥಾನದ ಸಂದರ್ಭದಲ್ಲಿ ಆಗುವಂತಹ ಅನ್ಯಾಯಗಳನ್ನು ತಡೆಗಟ್ಟಲು ನಿರಂತರವಾಗಿ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದೇ ಉದ್ದೇಶದಿಂದ ಫೆಬ್ರವರಿ 28 ರಂದು ಶುಕ್ರವಾರ ಬೆಳಿಗ್ಗೆ 10:00 ಘಂಟೆಗೆ ಜೇವರ್ಗಿಯ ಭೂತಪುರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನವನ್ನು ಆಯೋಜನೆ ಮಾಡಲಾಗಿದೆ. ಸೊನ್ನ ಮಠದ ಪೂಜ್ಯಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ಜೇರಟಗಿ ಮಠದ ಶ್ರೀ ಮ.ನಿ.ಪ್ರ ಮಹಾಂತ ಶಿವಯೋಗಿಗಳು ಮತ್ತು ಆಂದೋಲದ ಶ್ರೀ ಕರುಣೇಶ್ವರ ಮಠದ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈ ಅಧಿವೇಶನದ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕಲಬುರ್ಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಯಾದಗಿರಿ, ಬೀದರ, ರಾಯಚೂರು ಜಿಲ್ಲೆಯ ಕೆಲವು ತಾಲ್ಲೂಕುಗಳಿಂದ 300 ಕ್ಕೂ ಹೆಚ್ಚು ದೇವಸ್ಥಾನ ವಿಶ್ವಸ್ಥರು ಮತ್ತು ಪುರೋಹಿತರು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಈ ಅಧಿವೇಶನದಲ್ಲಿ  ದೇವಸ್ಥಾನಗಳ ಮೂಲಕ ವ್ಯಾಪಕ ಧರ್ಮಪ್ರಚಾರ ಹೇಗೆ ಮಾಡುವುದು, ದೇವಸ್ಥಾನಗಳ ಸಂಘಟನೆಯ ಅವಶ್ಯಕತೆ, ಆದರ್ಶ ವ್ಯವಸ್ಥಾಪನೆ,ದೇವಸ್ಥಾನದ ಸಂದರ್ಭದಲ್ಲಿ ಬರುವ ಕಾನೂನು ಅಡಚಣೆಗಳಿಗೆ  ವಕೀಲರಿಂದ ಸೂಕ್ತ ಕಾನೂನು ಮಾರ್ಗದರ್ಶನ ಹೀಗೆ ಅನೇಕ ವಿಷಯಗಳ ಬಗ್ಗೆ ಈ ಕ್ಷೇತ್ರದಲ್ಲಿ ಕಾರ್ಯ ಮಾಡುವ ಅನೇಕ ಗಣ್ಯ ವಕ್ತಾರರು ಮಾರ್ಗದರ್ಶನ ಮಾಡಲಿದ್ದಾರೆಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ. ಶಾಂತಯ್ಯ ಸ್ವಾಮಿ ಸ್ಥಾವರಮಠ, ಶ್ರೀ. ಮಡಿವಾಳಪ್ಪಗೌಡ ಪಾಟೀಲ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಯಮನಪ್ಪ ಭಜಂತ್ರಿ ಇವರು ಉಪಸ್ಥಿತರಿದ್ದರು.