ಸುದ್ಧಿಕನ್ನಡ ವಾರ್ತೆ
Goa : ನನಗೆ ದೆಹಲಿಗೆ ಹೋಗುವ ಆಸೆಯಿಲ್ಲ. ಮುಖ್ಯಮಂತ್ರಿಯಾಗಿ ಗೋವಾವನ್ನು ಅಭಿವೃದ್ಧಿಪಡಿಸಲು ಇನ್ನೂ ಸಾಕಷ್ಟು ಕೆಲಸಗಳಿವೆ. ನನಗೆ ಗೋವಾ ರಾಜ್ಯ ಸರಿಯಾಗಿದೆ. ನಾನು ಈ ಸಣ್ಣ ರಾಜ್ಯವನ್ನು ಮುನ್ನಡೆಸಲು ಬಯಸುತ್ತೇನೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ. ಈ ಮೂಲಕ ಪ್ರಮೋದ ಸಾವಂತ್ ತಾವು ದೆಹಲಿಗೆ ತೆರಳುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರಾಷ್ಟ್ರೀಯ ಸುದ್ಧಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿದರು. ನೀವು ಗೋವಾದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದೀರಿ. ನಿಮಗೆ ಆಡಳಿತದ ಅನುಭವವಿದೆ. ಪ್ರಧಾನಿ ಮೋದಿಯವರು ಪರೀಕರ್ ರವರನ್ನು ಕೇಂದ್ರಕ್ಕೆ ಕರೆಸಿಕೊಂಡಂತೆಯೇ ನಿಮ್ಮನ್ನು ಕೂಡ ಕೇಂದ್ರಕ್ಕೆ ಕರೆದರೆ ಹೋಗುತ್ತೀರಾ..? ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಾವಂತ್- ಗೋವಾದಂತಹ ಸಣ್ಣ ರಾಜ್ಯ ನನಗೆ ಉತ್ತಮ. ಗೋವಾದಲ್ಲಿ ಇನ್ನೂ ಬಹಳಷ್ಟು ಕೆಲಸಗಳು ಆಗಬೇಕಿದೆ. ನನಗೆ ದೆಹಲಿಗೆ ಹೋಗಲು ಇಷ್ಟವಿಲ್ಲ ಎಂದರು.
ಆಧ್ಯಾತ್ಮಿಕ ಪ್ರವಾಸೋದ್ಯಮವನ್ನೂ ಹೊಂದಿದೆ…
ಗೋವಾ ಪ್ರವಾಸೋದ್ಯಮವು ಸೂರ್ಯ,ಮರಳು ಮತ್ತು ಸಮುದ್ರಕ್ಕೆ ಸೀಮಿತವಾಗಿಲ್ಲ. ಐತಿಹಾಸಿಕ ದೇವಾಲಯಗಳು ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನೂ ಹೊಂದಿದೆ. ಗೋವಾ ರಾಜ್ಯದಲ್ಲಿ ಶೇ 70 ರಷ್ಟು ಹಿಂದೂಗಳಿದ್ದಾರೆ. ಮಹಾಲಸಾ ದೇವಾಲಯವು ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿಯಂತೆಯೇ ಇತಿಹಾಸವನ್ನು ಹೊಂದಿದೆ. ಈ 500 ವರ್ಷ ಹಳೇಯ ದೇವಾಲಯವನ್ನು ಪೋರ್ಚುಗೀಸರು ಕೆಡವಿದರು. ಆದರೆ ಸರ್ಕಾರವು ಅದನ್ನು ವೆರ್ಣಾದಲ್ಲಿ ಪುನರ್ನಿಮಿಸಿದೆ. ಪೋರ್ಚುಗೀಸರು ಕೆಡವಿದ್ದ ಸಪ್ತ ಕೋಟೇಶ್ವರ ದೇವಾಲಯವನ್ನು ಶಿವಾಜಿ ಮಹಾರಾಜರು ಪುನರ್ನಿರ್ಮಿಸಿದರು. ಮುಖ್ಯಮಂತ್ರಿಯಾಗಿ ಇದೀಗ ಈ ದೇವಾಲಯವನ್ನು ನವೀಕರಿಸಿ ಸಾರ್ವಜನಿಕರಿಗೆ ಅರ್ಪಿಸುವ ಭಾಗ್ಯ ನನಗೆ ಲಭಿಸಿತು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಗೋವಾ ಸರ್ಕಾರವು 2037 ರ ವೇಳೆಗೆ ಅಭಿವೃದ್ಧಿ ಹೊಂದಿದ ಗೋವಾ ಗುರಿಯನ್ನು ಹೊಂದಿದೆ. ಮುಂದಿನ 25 ವರ್ಷಗಳ ಚಿಂತನೆ ನಡೆಸಿ ಕೈಗೊಳ್ಳಲಾಗುತ್ತಿರುವ ಮೂಲಭೂತ ಅಭಿವೃದ್ಧಿ ಯೋಜನೆಗಳು ಶೇ 80 ರಷ್ಟು ಪೂರ್ಣಗೊಂಡಿದೆ. ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅಗತ್ಯ ಮಾನವ ಶಕ್ತಿಯನ್ನು ಸೃಷ್ಠಿಸಲು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ನಾನು ವಿಐಪಿ ಸಂಸ್ಕøತಿಯಲ್ಲಿ ವಾಸಿಸುವುದಿಲ್ಲ…
ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ನನಗೆ ಸಕಾರಾತ್ಮಕ ಶಕ್ತಿ ಸಿಕ್ಕಿದೆ. ಮಹಾಕುಂಭದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಅದೊಂದು ಅಧ್ಬುತ ಅನುಭವ. ಮಹಾಕುಂಭಕ್ಕೆ ತೆರಳಲು ವಿಐಪಿ ಸೌಲಭ್ಯಗಳ ಅಗತ್ಯವಿಲ್ಲ. ನಾನು ಆ ರೀತಿಯ ವಿಐಪಿ ಸಂಸ್ಕøತಿಯಲ್ಲಿ ವಾಸಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.
ಪ್ರವಾಸೋದ್ಯಮದ ಬಗ್ಗೆ ಸುಳ್ಳು ಮಾಹಿತಿ…
ಗೋವಾ ಪ್ರವಾಸೋದ್ಯಮವು ರಾಜ್ಯ ಸರ್ಕಾರದ ದೇಶೀಯ ಆದಾಯಕ್ಕೆ ಶೇ 16.4 ರಷ್ಟು ಕೊಡುಗೆ ನೀಡುತ್ತದೆ. ಗೋವಾದ ಜನಸಂಖ್ಯೆಯ ಶೇ 35 ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮವನ್ನು ಅವಲಂಭಿಸಿದ್ದಾರೆ. ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆಲವು ಪ್ರಭಾವಿಗಳು ಗೋವಾ ಪ್ರವಾಸೋದ್ಯಮದ ಬಗ್ಗೆ ತಪ್ಪು ಮಾಹಿತಿ ಹರಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.