ಸುದ್ಧಿಕನ್ನಡ ವಾರ್ತೆ

ಕೃಪೆ: ವ್ಯಂಗ್ಯಚಿತ್ರಕಾರ ಜಿ.ಎಂ.ಬೊಮ್ನಳ್ಳಿ
ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳಲ್ಲಿ ಈಗ ಹೊಸ ಸಿಂಗಾರ ಅರಳುವ ಸಮಯ. ಒಂದು ಹೊಸ ಸಿಂಗಾರ ಅರಳಿತು ಎಂದಾಗ ಅದನ್ನು ಈತನಕ ಆವರಿಸಿಕೊಂಡಿದ್ದ ಹಾಳೆ ಮತ್ತು ಒಣಗಿದ ಸೋಗೆ ಆ ಮರದಿಂದ ಕಳಚಿ ಕೆಳಕ್ಕೆ ಬೀಳುತ್ತದೆ. ಹಾಗಾಗಿ ಈ ಸಮಯದಲ್ಲಿ ಅಡಿಕೆ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಹಾಳೆಗಳು ಸಿಗುತ್ತವೆ. ಇಂತಹ ಅಡಿಕೆ ಹಾಳೆಗಳನ್ನು ಸಂಗ್ರಹ ಮಾಡಿ ಅವುಗಳಿಂದ ಊಟದ ಪ್ಲೇಟ್, ಉಪಹಾರದ ಪ್ಲೇಟ್, ಲೋಟ, ತಲೆಗೆ ಹಾಕುವ ಟೊಪ್ಪಿ, ಇಷ್ಟು ಮಾತ್ರವಲ್ಲದೆಯೇ ಅವುಗಳಿಂದ ಹೂವುಗಳು, ಕರಕುಶಲ ತಯಾರಿಕೆ ಗಳನ್ನು ಮಾಡಲಾಗುತ್ತದೆ.

ಆದರೂ ಒಟ್ಟಾರೆಯಾಗಿ ಶೇ 20 ರಷ್ಟು ಮಾತ್ರವೇ ಅಡಿಕೆ ಹಾಳೆಗಳುಈ ಬಗೆಯಲ್ಲಿ ಬಳಕೆಯಾದರೆ, ಉಳಿದ ಶೇ 80 ರಷ್ಟು ಹಾಳೆಗಳು ತೋಟದಲ್ಲಿಯೇ ಹಾಳಾಗುತ್ತಿವೆ. ಅಲ್ಲೇ ಹಾಳಾಗುತ್ತಿವೆ ಅಂದರೆ ಅವು ಹಾಳಲ್ಲ. ತೋಟಕ್ಕೆ ಅವುಗಳನ್ನು ಮುಚ್ಚಿಗೆ ಮಾಡಿದರೂ ಸಾಕು ಅದು ಪ್ರಯೋಜನ ಕೊಡುತ್ತದೆ. ಅಲ್ಲೇ ಮಣ್ಣಾದರೂ ಅದು ಉತ್ತಮ ಸಾವಯವ ಗೊಬ್ಬರವೇ ಆಗುತ್ತದೆ ಎಂಬುದು ಬೇರೆ ವಿಚಾರ.

ಇನ್ನು ಲೆಕ್ಕಾಚಾರ ಹಾಕಿದರೂ ಅಡಿಕೆ ತೋಟದಿಂದ ಅಡಿಕೆ ಹಾಳೆಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುವುದು ರೈತರಿಗೆ ಲಾಭದಾಯಕ ಎನ್ನಿಸುತ್ತಿಲ್ಲ. ಒಂದು ಅಡಿಕೆ ಹಾಳೆಗೆ ಒಂದೂವರೆ ರೂಪಾಯಿ ಕೊಟ್ಟು ಖರೀದಿ ಮಾಡಲು ಜನರಿದ್ದಾರೆ. ಆದರೆ ಈಗಿನ ದುಬಾರಿ ಕೂಲಿ ಧಾರಣೆಯಲ್ಲಿ ಕೂಲಿ ಕೊಟ್ಟು ಹಾಳೆ ಸಂಗ್ರಹ ಮಾಡುವುದು ಆಗದ ಕೆಲಸವಾಗಿದೆ. ಹಾಗಾಗಿ ಅಡಿಕೆ ಹಾಳೆಯ ಬೇರೆ ರೂಪದ ಬಳಕೆ ಈಗಲೂ ಅಷ್ಟು ದೊಡ್ಡ ಮಟ್ಟದಲ್ಲಿ ಆಗದೇ ಅವೆಲ್ಲ ತೋಟದಲ್ಲಿ ಮೇಲು ಹಾಸಾಗಿ ಮಣ್ಣಾಗುತ್ತಿವೆ.