ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕದಿಂದ ಗೋವಾಕ್ಕೆ ಬಾಳೇಕಾಯಿ ತುಂಬಿಕೊಂಡು ಬರುವ ಜೀಪ್ ಗಳನ್ನೇ ಟಾರ್ಗೇಟ್ ಮಾಡಿ ಅವರ ಬಳಿ ಇದ್ದ ಹಣವನ್ನು ಹಾಡುಹಗಲೇ ಧರೋಡೆ ಮಾಡಿ ಪರಾರಿಯಾಗುತ್ತಿರುವ ಘಟನೆ ಮರುಕಳಿಸುತ್ತಿದೆ. ಇದರಿಂದಾಗಿ ಕರ್ನಾಟಕದಿಂದ ಗೋವಾಕ್ಕೆ ಬಾಳೆಕಾಯಿ ತುಂಬಿಕೊಂಡು ಬರಲೂ ಕೂಡ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಸುಮಾರು 6 ತಿಂಗಳಲ್ಲಿ ಹತ್ತಾರು ಬಾಳೆಕಾಯಿ ಗಾಡಿಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಧರೋಡೆಕೋರರು ಲಪಟಾಯಿಸಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಕಳ್ಳರ ಗ್ಯಾಂಗ್ ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುವ ಅಗತ್ಯವಿದೆ.

ಯಲ್ಲಾಪುರದ ಬಾಳೆಕಾಯಿ ಗಾಡಿ ಗೋವಾದಲ್ಲಿ ಧರೋಡೆ…
ಫೆಬ್ರುವರಿ 20 ರಂದು ಕೂಡ ಇಂತಹದ್ದೇ ಘಟನೆ ಗೋವಾದ ಮಡಗಾಂವ ಸಮೀಪತ ಬೆತಲ್ ನಲ್ಲಿ ಸಂಭವಿಸಿದೆ. ಧನಂಜಯ ಗೌಡ ಎಂಬ ಬಾಳೆಕಾಯಿ ಗಾಡಿ ಚಾಲಕರು ಗೋವಾದಲ್ಲಿ ಬಾಳೆಕಾಯಿ ಮಾರಾಟ ಮಾಡಿ ಕಾರವಾರ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿರುವಾಗ ಬೇತಲ್ ಬಳಿ ಇಬ್ಬರು ಬೈಕ್ ನಲ್ಲಿ ಬಂದು ಬಾಳೆಕಾಯಿ ಜೀಪ್ ಅಡ್ಡಗಟ್ಟಿದರು ಎನ್ನಲಾಗಿದೆ. ತಾವು ಪೋಲಿಸರು ಎಂದು ಹೇಳಿಕೊಂಡ ಇವರು ಈ ಗಾಡಿಯಲ್ಲಿ ಮಾದಕ ವಸ್ತುಗಳ ಸಾಗಾಟವಾಗುತ್ತಿದೆ ಎಂದು ನಮಗೆ ಮಾಹಿತಿ ಬಂದಿದೆ, ತಪಾಸಣೆ ಸಡೆಸುವುದಾಗಿ ಹೇಳಿ ಜೀಪ್ ಚಾಲಕರ ಬಳಿ ಬಂದು ಕುಳಿತರು. ಜೇಬಿನಲ್ಲಿ ಏನು ಗಾಂಜಾ ತುಂಬಿಕೊಂಡಿದೆಯಾ…? ಎಂದು ಡ್ರೈವರ್ ಬಳಿ ಕೇಳಿ ಕಿಸೆ ತಪಾಸಣೆ ನಡೆಸುವ ನೆಪದಲ್ಲಿ ಇವರ ಬಳಿಯಿದ್ದ 47,700 ರೂ ಹಣವನ್ನು ಕಸಿದುಕೊಂಡು ತಪಾಸಣೆ ನಡೆಸುವ ನೆಪ ಮಾಡಿದರು. ನಂತರ ಡ್ರೈವರ್ ಬಳಿ ಜೀಪ್ ಡೋರ್ ಬಳಿ ಬಂದ ಇನ್ನೋರ್ವ ವ್ಯಕ್ತಿ ಡ್ರೈವರ್ ಗಮನವನ್ನು ಅತ್ತ ಸೆಳೆದನು. ಅಷ್ಟರಲ್ಲಿ ಜೀಪ್ ಒಳಗೆ ಕುಳಿತಿದ್ದ ವ್ಯಕ್ತಿ ನಿಮ್ಮ ಹಣವನ್ನು ನಿಮ್ಮ ಬ್ಯಾಗನಲ್ಲಿ ಇಟ್ಟಿದ್ದೇವೆ ಎಂದು ಹೇಳಿ ಗಾಡಿಯಿಂದ ಇಳಿದ. ಕೂಡಲೇ ಜೀಪ್ ಡ್ರೈವರ್ ತನ್ನ ಬ್ಯಾಗ್ ತಪಾಸಣೆ ನಡೆಸುವಷ್ಟರಲ್ಲಿ ಆ ಇಬ್ಬರೂ ಧರೋಡೆಕೋರರು ಪರಾರಿಯಾದರು ಎನ್ನಲಾಗಿದೆ.

ಕೂಡಲೇ ಬಾಳೆಕಾಯಿ ಗಾಡಿ ಡ್ರೈವರ್ ಧನಂಜಯ ಗೌಡ ರವರು ಸಮೀಪದ ಕುಕ್ಕಳ್ಳಿ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದರೂ ಪೋಲಿಸರು ಕೇವಲ ಕಾಲಿ ಪೇಪರ್ ನಲ್ಲಿ ಬರೆದುಕೊಂಡು ಕೈಬಿಟ್ಟಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಪೋಲಿಸರೇ ಬಂದು ಧರೋಡೆ ಮಾಡಿಹೋದರೇ…? ಅಥವಾ ಪೋಲಿಸರು ಎಂದು ಹೇಳಿ ಧರೋಡೆಕೋರರು ಈ ಕೃತ್ಯ ಎಸಗುತ್ತಿದ್ದಾರೆಯೇ..? ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಬಾಳೆಕಾಯಿ ಗಾಡಿ ಇವರ ಟಾರ್ಗೇಟ್…?
ಈ ಕುರಿತಂತೆ ಯಲ್ಲಾಪುರದ ಮತ್ತೋರ್ವ ಬಾಳೆಕಾಯಿ ಜೀಪ್ ಚಾಲಕ ನಾಗರಾಜ್ ಗುತ್ತಲಕರ್ ಪ್ರತಿಕ್ರಿಯೆ ನೀಡಿ- ಕಳೆದ ಐದಾರು ತಿಂಗಳಲ್ಲಿ ಇಂತಹ ಹತ್ತಾರು ಘಟನೆಗಳು ನಡೆದಿದ್ದು, ಬೇರೆ ಬೇರೆ ಕಾರಣಹೇಳಿ, ಬೇರೆ ಬೇರೆ ವೇಷದಲ್ಲಿ ಬಾಳೆಕಾಯಿ ಗಾಡಿಯಲ್ಲಿರುವ ಹಣವನ್ನು ದೋಚಿ ಪರಾರಿಯಾಗುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಕಳೆದ ಕೆಲ ತಿಂಗಳಲ್ಲಿ ಇಂತಹ ವಿವಿಧ ಘಟನೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಧರೋಡೆಕೋರರು ದೋಚಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ನನ್ನ ಗಾಡಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು ನಾನೂ ಹಣ ಕಳೆದುಕೊಂಡಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ.

ಗೋವಾ ಕನ್ನಡಪರ ಸಂಘಟನೆಗಳು ಕಾರ್ಯಾಚರಣೆಗೆ ಮುಂದಾಗಲಿ…
ಗೋವಾದಲ್ಲಿ ಹತ್ತಾರು ಕನ್ನಡಪರ ಸಂಘಟನೆಗಳಿವೆ. ಈ ಧರೋಡೆ ಪ್ರಕರಣವನ್ನು ಭೇದಿಸುವಲ್ಲಿ ಗೋವಾದಲ್ಲಿರುವ ಕನ್ನಡಿಗರ ಸಂಘಟನೆಗಳು ಮುಂದಾಗುವ ಅಗತ್ಯವಿದೆ. ಕರ್ನಾಟಕದಿಂದ ಪ್ರತಿದಿನ ಅಗತ್ಯವಸ್ತುಗಳ ಪೂರೈಕೆಯಾಗುತ್ತದೆ. ಆದರೆ ಇಂತಹ ಘಟನೆಗಳಿಂದ ಗೋವಾಕ್ಕೆ ಅಗತ್ಯ ವಸ್ತುಗಳನ್ನು ತರಲು ಕೂಡ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಪೋಲಿಸರು ಕೂಡ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.