ಸುದ್ದಿ ಕನ್ನಡ ವಾರ್ತೆ
ಅಂಕೋಲಾ ತಾಲೂಕಿನ ಗಡಿಭಾಗದಲ್ಲಿರುವ ಸುಂಕಸಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಲಗದ್ದೆಯ ವಿಶ್ವೇಶ್ವರ ಗಾoವ್ಕರ್ ಜೋಗಿ ಮನೆ ಎಂಬುವರ ತೋಟವೆಂದರೆ ಕಳೆದ ಬುಧವಾರ ಬೆಳಿಗ್ಗೆ 9:00 ಸುಮಾರಿಗೆ ಬೃಹತ್ ಗಾತ್ರದ ನಾಲ್ಕೈದು ಬಂಡೆಗಳು ತನ್ನಷ್ಟಕ್ಕೆ ತಾನೇ ಕುಸಿದು ಬಿದ್ದ ಘಟನೆ ನಡೆದಿದೆ.
ಈ ಬಂಡೆಗಳು ಉರುಳುವಾಗ ಭಾರಿ ಪ್ರಮಾಣದ ಸದ್ದು ಉಂಟಾಗಿದ್ದು ಸುತ್ತಮುತ್ತಲಿನ ಭಾಗದ ನಿವಾಸಿಗಳಿಗೆ ಕೆಲಕಾಲ ಆತಂಕ ಉಂಟಾಗುವಂತೆ ಆಗಿತ್ತು. ಈ ಬೃಹತ್ ಬಂಡೆಗಳು ಉರುಳು ಬಿದ್ದ ಕಾರಣ ತೋಟಕ್ಕೆ ನೀರು ಹಾಯಿಸುವ ನೀರಾವರಿ ಕಾಲುವೆ ಸಂಪೂರ್ಣ ಮುಚ್ಚಿ ಹೋಗಿದೆ. ಸುಮಾರು 40 ಅಡಿ ಉದ್ದ 25 ಅಡಿ ಎತ್ತರದ ಒಂದೊಂದು ಬಂಡೆ ಸೇರಿದಂತೆ ನಾಲ್ಕಾರು ಬಂಡೆಗಳು ತೋಟಕ್ಕೆ ಬಂದು ಬಿದ್ದಿವೆ. ಬಂಡೆಗಳ ತುಣುಕುಗಳು 50 ರಿಂದ 60 ಅಡಿ ದೂರ ಹೋಗಿ ಬಿದ್ದಿವೆ. ಬಂಡೆಗಳ ತುಣುಕುಗಳು ತೋಟದ ತುಂಬೆಲ್ಲ ಬಿದ್ದಿದ್ದು ತೋಟದಿಂದ ಈ ಬಂಡೆಗಳನ್ನು ತೆರವು ಮಾಡುವುದು ಕಷ್ಟ ಎಂಬಂತಾಗಿದೆ.
ಘಟನಾ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಶೀಲ್ದಾರ್ ಅನಂತಶಂಕರ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಂಡೆ ಕಲ್ಲುಗಳನ್ನು ತೋಟದಿಂದ ಹೊರಗೆ ಹಾಕುವಂತೆ ವಿಶ್ವೇಶ್ವರ ಗಾಂವಕರ್ ವಿನಂತಿಸಿದ್ದಾರೆ. ಘಟನಾ ಸ್ಥಳದಲ್ಲಿ ಸುಂಕಸಾಳ ಪಿಡಿಓ ನಾಗೇಂದ್ರ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯ ಚಂದು ನಾಯಕ್, ಗ್ರಾಮ ಪಂಚಾಯತಿ ಸಿಬ್ಬಂದಿ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದು ಪರಿಶೀಲನೆ ನಡೆಸಿದ್ದಾರೆ.