ಸುದ್ದಿ ಕನ್ನಡ ವಾರ್ತೆ
ಮುದ್ದೇಬಿಹಾಳ: ಮದವೇರಿಸಿಕೊಂಡು ಸಾರ್ವಜನಿಕರಿಗೆ, ವಾಹನಗಳಿಗೆ ಸಿಕ್ಕಂತೆ ಗುದ್ದುತ್ತಾ ಹಾನಿ ಮಾಡುತ್ತಿದ್ದ ಎಮ್ಮೆಯೊಂದನ್ನು ಅಂದಾಜು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಹಿಡಿದು ಪೊಲೀಸ್ ಠಾಣೆಯಲ್ಲಿ ಕಟ್ಟಿಹಾಕಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಗುರುವಾರ ಸಂತೆಯ ದಿನವಾದ್ದರಿಂದ ಹೆಚ್ಚಿನ ಜನದಟ್ಟಣೆ ಇತ್ತು. ಬಸ್ ನಿಲ್ದಾಣದಲ್ಲಿ ದಾಂಗುಡಿ ಇಡುತ್ತಿದ್ದ ಇದನ್ನು ಹಿಡಿಯಲು ನಡೆಸಿದ ಯತ್ನ ವಿಫಲವಾಯಿತು. ಅದು ತಪ್ಪಿಸಿಕೊಂಡು ಬಡಾವಣೆಗಳಲ್ಲೆಲ್ಲ ಓಡಾಡುತ್ತ ಕೊನೆಗೆ ಹಳೇ ಸರ್ಕಾರಿ ಆಸ್ಪತ್ರೆಯ ಆವರಣದೊಳಕ್ಕೆ ನುಗ್ಗಿತು. ಇಲ್ಲಿ ಸುತ್ತಲೂ ಕಂಪೌಂಡ್ ಇದ್ದ ಕಾರಣ ಬಲೆಗೆ ಬಿತ್ತೆಂದು ಭಾವಿಸಿದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ಕೂಡಲೇ ಪುರಸಭೆಯ ಜೆಸಿಬಿ, ದನ, ಎತ್ತು ಹಿಡಿದು ಪಳಗಿಸುವಲ್ಲಿ ನುರಿತ ತಮ್ಮ ಸ್ನೇಹಿತರ ತಂಡ ಸ್ಥಳಕ್ಕೆ ಕರೆಸಿ ಕಾರ್ಯಾಚರಣೆಗೆ ಅಣಿಯಾದರು. ಕಂಪೌಂಡ್ ಹೊರಗೆ ಜನರನ್ನು ನಿಯಂತ್ರಿಸಲು ಸಿಪಿಐ ಮೆಹಬೂಬ, ಪೇದೆ ಸಲೀಮ್ ಹತ್ತರಕಿಹಾಳ ಅವರು ಕಾವಲಾದರು.
ಗೊಳಸಂಗಿ ನೇತೃತ್ವದ ತಂಡದ ಸದಸ್ಯರಾದ ಸಲೀಮ ಬೇಪಾರಿ, ಮಕ್ತುಮ್ ಬೇಪಾರಿ ಅವರು ಎಮ್ಮೆ ಕಟ್ಟಿಹಾಕಲು ಬಲವಾದ ಹಗ್ಗ ತಂದರು. ಯಾಸೀನ್ ಅತ್ತಾರ, ಯಾಸೀರ್ ಢವಳಗಿ, ಶಬ್ಬೀರ ಪಡ್ನೂರೆ , ಪುರಸಭೆ ಪೌರ ಕಾರ್ಮಿಕರು ಎಮ್ಮೆಯನ್ನು ಅಟ್ಟಾಡಿಸಿ ಕಟ್ಟಿಹಾಕಲು ಹರಸಾಹಸ ಪಡತೊಡಗಿದರು. ಕೆಲಹೊತ್ತು ಎಲ್ಲರನ್ನೂ ಓಡಾಡಿಸಿ, ಕೆಲವರಿಗೆ ಗುದ್ದಿ ತೊಂದರೆ ನೀಡುತ್ತಿದ್ದ ಎಮ್ಮೆಯ ಕುತ್ತಿಗೆಗೆ ಸಮಯ ನೋಡಿಕೊಂಡು ಜೆಸಿಬಿ ಚಾಲಕ ಯಲ್ಲಪ್ಪ ಜಾಣತನದಿಂದ ಜೆಸಿಬಿಯ ಬಕೆಟ್ ನಿಧಾನವಾಗಿ ಇಳಿಸಿ ತಪ್ಪಿಸಿಕೊಂಡು ಹೋಗದಂತೆ ನೆಲಕ್ಕೆ ಒತ್ತಿದಾಗ ಕೆಳಗೆ ಬಿದ್ದ ಎಮ್ಮೆಯನ್ನು ಹಗ್ಗದಿಂದ ಕಟ್ಟಿಹಾಕುವಲ್ಲಿ ತಂಡ ಕೊನೆಗೂ ಯಶಸ್ವಿಯಾಯಿತು. ನಂತರ ಅದನ್ನು ಟಂಟಂ ವಾಹನದಲ್ಲಿ ಪೊಲೀಸ್ ಠಾಣೆಗೆ ಸಾಗಿಸಿ ಅಲ್ಲಿ ಮರವೊಂದಕ್ಕೆ ಕಟ್ಟಿ ಹಾಕಿ ಮೇವು, ನೀರಿನ ಸೌಲಬ್ಯ ಕಲ್ಪಿಸಲಾಯಿತು. ಎಮ್ಮೆಯ ಮಾಲಿಕರು ಬಂದರೆ ಮರಳಿಸಲು, ಇಲ್ಲವಾದರೆ ಮಾರಾಟ ಮಾಡಲು ತೀರ್ಮಾನಿಸಲಾಯಿತು. ಅಕಸ್ಮಾತ್ ಎಮ್ಮೆ ಜನದಟ್ಟಣೆ ಇರುವ ಬಜಾರಲ್ಲಿ ನುಗ್ಗಿದ್ದರೆ ಮಕ್ಕಳು, ಮಹಿಳೆಯರು, ವೃದ್ದರು ಸೇರಿ ಹಲವರ ಪ್ರಾಣಹಾನಿ ಆಗುವ ಸಂಭವ ಇತ್ತು ಎಂದು ಪ್ರತ್ಯಕ್ಷದರ್ಶಿ ಲಾಡ್ಲೇಮಶ್ಯಾಕ ನದಾಫ ತಿಳಿಸಿದರು. ಒಟ್ಟಿನಲ್ಲಿ ಬಹು ಹೊತ್ತಿನವರೆಗೆ ನಡೆದ ಕಾರ್ಯಾಚರಣೆಯಿಂದ ಎಮ್ಮೆ ಬಂಧಿಸಲ್ಪಟ್ಟು ಹಲವರ ಪ್ರಾಣ, ವಾಹನಗಳ ಹಾನಿ ತಪ್ಪಿದಂತಾಯಿತು. ಮೂಲತಹ ಸೌಮ್ಯ ಸ್ವಭಾವದ ಸಾಕು ಎಮ್ಮೆ ಹೀಗೆ ಮದವೇರಿಸಿಕೊಂಡು ಪುಂಡಾಟ ನಡೆಸಿದ್ದಕ್ಕೆ ಕಾರಣ ಸ್ಪಷ್ಟವಾಗಲಿಲ್ಲ.