ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯ ಸರ್ಕಾರವು ಮಹಾಕುಂಭಮೇಳಕ್ಕೆ ಮುಖ್ಯಮಂತ್ರಿ ದೇವದರ್ಶನ ಯೋಜನೆಯ ಅಡಿಯಲ್ಲಿ 3 ಉಚಿತ ರೈಲು ವ್ಯವಸ್ಥೆ ಮಾಡಿದೆ. ಇದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟು ಮತ್ತು 60 ವರ್ಷದೊಳಗಿನ ಗೋವಾದ ನಾಗರೀಕರಿಗೆ ಮಾತ್ರ ಮಹಾಕುಂಭ ಮೇಳಕ್ಕೆ ಉಚಿತ ರೈಲು ವ್ಯವಸ್ಥೆ ಮಾಡಲಾಗಿದೆ. 18 ವರ್ಷದೊಳಗಿನ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ರೈಲಿನೊಳಗೆ ಪ್ರವೇಶಿಸಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಹತ್ತಿರದ ರೈಲು ನಿಲ್ದಾಣದಲ್ಲಿ ಅವರನ್ನು ಕೆಳಕ್ಕೆ ಇಳಿಸಲಾಗುತ್ತದೆ. ಈ ಯಾತ್ರಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ನೀಡುವ ಗುರುತಿನ ಚೀಟಿ ಖಡ್ಡಾಯವಾಗಿದೆ. ಪ್ರತಿಯೊಬ್ಬರೂ ಕೂಡ ಸ್ವಂತ ಜವಾಬ್ದಾರಿಯ ಮೇಲೆ ಉಚಿತ ರೈಲ್ವೆ ಸೇವೆ ಪಡೆದುಕೊಳ್ಳಬೇಕು ಎಂದು ರಾಜ್ಯ ಸಮಾಜ ಕಲ್ಯಾಣ ಖಾತೆಯ ಸಚಿವ ಸುಭಾಷ ಫಳದೇಸಾಯಿ ಮಾಹಿತಿ ನೀಡಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಫೆಬ್ರುವರಿ 13 ರಂದು 2 ನೇಯ ರೈಲು ಮತ್ತು ಫೆಬ್ರುವರಿ 21 ರಂದು ಗೋವಾದಿಂದ ಪ್ರಯಾಗರಾಜ್ ಗೆ ಮೂರನೇಯ ರೈಲು ಹೊರಡಲಿದೆ. ಫೆಬ್ರುವರಿ 6 ರಂದು ಗೋವಾದಿಂದ ಮಹಾಕುಂಭ ಮೇಳಕ್ಕೆ ಈ ರೈಲಿನಲ್ಲಿ ಹೊರಟಿದ್ದ 1191 ಜನ ಯಾತ್ರಾರ್ಥಿಗಳು ಗೋವಾಕ್ಕು ಸುರಕ್ಷಿತವಾಗಿ ವಾಪಸ್ಸು ಬಂದು ತಲುಪಿದ್ದಾರೆ ಎಂದು ಸುಭಾಷ ಫಳದೇಸಾಯಿ ಮಾಹಿತಿ ನೀಡಿದರು.(2nd free train from Goa to Mahakumbamela on 13th Feb)
ಪ್ರಯಾಗರಾಜ್ ಗೆ ಎರಡನೇಯ ರೈಲು ಫೆಬ್ರುವರಿ 13 ರಂದು ಮಧ್ಯಾನ್ಹ 4.40 ಕ್ಕೆ ಮಡಗಾಂವ ರೈಲು ನಿಲ್ದಾಣದಿಂದ ಹೊರಡಲಿದೆ. ಈ ರೈಲು ಫೆಬ್ರುವರಿ 15 ಬೆಳಿಗ್ಗೆ 6.25 ಕ್ಕೆ ಪ್ರಯಾಗರಾಜ್ ತಲುಪಲಿದೆ. ಗುರುತಿನ ಚೀಟಿ ಇಲ್ಲದವರು ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಪ್ರಯಾಗರಾಜ್ ನಲ್ಲಿ ಭಾರಿ ಚಳಿ ಇರುವುದರಿಂದ ಪ್ರಯಾಣಿಕರು ಸ್ವೇಟರ್ ಮತ್ತು ಇತರ ವಸ್ತುಗಳನ್ನು ತರಬೇಕು ಎಂದು ಸಚಿವರು ಮಾಹಿತಿ ನೀಡಿದರು.
ಪ್ರಯಾಗರಾಜ್ ತಲುಪಿದ ನಂತರ ಭಕ್ತರು 30 ಕಿ.ಮಿ ದೂರ ನಡೆಯಲು ಸಿದ್ಧರಿರಬೇಕು. ಪ್ರಯಾಗರಾಜ್ ತಲುಪಿದ ನಂತರ ಭಕ್ತರು ಆಹಾರ ಮತ್ತು ಇತರ ವೆಚ್ಛಗಳನ್ನು ಭರಿಸಬೇಕಾಗುತ್ತದೆ. ಭಕ್ತರ ಸುರಕ್ಷತೆ,ವಸ್ತುಗಳು, ಮತ್ತು ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.