ಸುದ್ಧಿಕನ್ನಡ ವಾರ್ತೆ
Goa : ಗೋವಾದ ಶಾಲಾ ಕಾಲೇಜುಗಳಲ್ಲಿ ನೀಡುವ ಪ್ರಮಾಣಪತ್ರಗಳಲ್ಲಿ ಜಾತಿ ಕಾಲಂ (Caste column)  ಇಲ್ಲದಿರುವುದು ಗೋವಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯುಂಟಾಗುವಂತೆ ಮಾಡಿದೆ. ಅದರಲ್ಲಿಲೂ ಬಹುಮುಖ್ಯವಾಗಿ ಕರ್ನಾಟಕದಿಂದ ಗೋವಾಕ್ಕೆ ಬರುವ ವಲಸೆ ಕಾರ್ಮಿಕ ಮಕ್ಕಳಂತೂ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

ಕರ್ನಾಟಕದ ನೆರೆಯ ರಾಜ್ಯವಾಗಿರುವ ಗೋವಾಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬಂದು ನೆಲೆಸುತ್ತಾರೆ. ಆಗ ತಮ್ಮೊಂದಿಗೆ ಕರ್ನಾಟಕದಿಂದ ಗೋವಾಕ್ಕೆ ತಮ್ಮ ಮಕ್ಕಳನ್ನು ಗೋವಾದ ಕನ್ನಡ ಶಾಲೆಗೆ ಸೇರಿಸುತ್ತಾರೆ. ಇಲ್ಲಿ ನಾಲ್ಕೈದು ವರ್ಷಗಳ ನಂತರ ಇವರು ಮತ್ತೆ ಕರ್ನಾಟಕಕ್ಕೆ ವಾಪಸ್ಸಾಗಬೇಕಾದರೆ ಇಲ್ಲಿ ವಿದ್ಯಾರ್ಥಿಗಳಿಗೆ ಟ್ರಾನ್ಸಫರ್ ಸರ್ಟಿಫಿಕೇಟ್ ( Transfer Certificate) ನಲ್ಲಿ  ಜಾತಿ ಕಾಲಂ ಇಲ್ಲದಿರುವುದರಿಂದ ಯಾವುದೇ ಜಾತಿ ನಮೂದಿಸಿರುವುದು ಕರ್ನಾಟಕದಲ್ಲಿ ಇದೇ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಹೆಚ್ಚಿನ ತೊಂದರೆಯುಂಟಾಗುತ್ತಿದೆ. ಇಂತಹ ಸಮಸ್ಯೆಯಿಂದಾಗಿ ಬುದ್ಧಿವಂತ ಮಕ್ಕಳಿಗೂ ಕೂಡ ಮತ್ತೆ ಕರ್ನಾಟಕದಲ್ಲಿ ಉನ್ನತ ವ್ಯಾಸಂಗಕ್ಕೂ ತೊಂದರೆಯಾಗಿ ಶಿಕ್ಷಣ ಮೊಟಕುಗೊಳಿಸುವ ಸಂದರ್ಭ ಎದುರಾಗುತ್ತಿದೆ.

ಗೋವಾಕ್ಕೆ ಬಂದು ನೆಲೆಸುವ ಕಾರ್ಮಿಕರು ಮಾತ್ರವಲ್ಲದೆಯೇ ಇತರ ಉದ್ಯೋಗದಲ್ಲಿ ತೊಡಗಿಕೊಂಡು ಕರ್ನಾಟಕಕ್ಕೆ ವಾಪಸ್ಸಾಗುವವರಿಗೂ ಕೂಡ ಇಂದಹದ್ದೇ ಸಮಸ್ಯೆ ಎದುರಾಗಿ ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುವಂತಾಗುತ್ತಿದೆ. ಈ ಸಮಸ್ಯೆ ಈ ಹಿಂದಿನಿಂದಲೂ ಇದ್ದರೂ ಕೂಡ ಕರ್ನಾಟಕ ಸರ್ಕಾರವಾಗಲೀ ಅಥವಾ ಗೋವಾ ಸರ್ಕಾರವಾಗಲೀ ಯಾವುದೇ ರೀತಿಯ ಕ್ರಮಕ್ಕೂ ಮುಂದಾಗದಿರುವುದು ಖೇದಕರ ಸಂಗತಿಯೇ ಸರಿ.

ಗೋವಾದಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಗೋವಾ ಸರ್ಕಾರದ ಉನ್ನತ ಸ್ಥಾನದಲ್ಲಿಯೂ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಗೋವಾದ ಬಹುತೇಕ ದೇವಾಲಯಗಳಲ್ಲಿ ಕರ್ನಾಟಕ ಮೂಲಕ ಅರ್ಚಕರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಉದ್ಯಮ ಕ್ಷೇತ್ರದಲ್ಲಂತೂ ಗೋವಾದಲ್ಲಿ ಕನ್ನಡಿಗರೇ ಹೆಚ್ಚಿದ್ದಾರೆ. ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ನೆಲೆಸಿದ್ದರೂ ಕೂಡ ಇಂತಹ ಹಲವು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡಿದೆ.

ಗೋವಾದಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡ, ಮರಾಠಿ ಅಥವಾ ಇಂಗ್ಲೀಷ್ ಯಾವುದೇ ಮೀಡಿಯಂ ನಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಕೂಡ ಇವರು ಕರ್ನಾಟಕಕ್ಕೆ ಉನ್ನತ ವ್ಯಾಸಂಗಕ್ಕೆ (  Karnataka for higher studies) ವಾಪಸ್ಸಾಗಬೇಕಾದರೆ ಅಥವಾ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬೇಕಾದರೆ ಗೋವಾದಲ್ಲಿ ಜಾತಿ ಕಾಲಂ ಇಲ್ಲದಿರುವುದು ಎಲ್ಲರಿಗೂ ತೊಂದರೆಯಾಗುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಾದರೂ ಇಂತಹ ಸಮಸ್ಯೆ ನಮ್ಮ ಮಕ್ಕಳಿಗೆ ಬಾರದಂತೆ ನೋಡಿಕೊಳ್ಳಲು ನಾವೆಲ್ಲ ಎಚ್ಚೆತ್ತು ಕರ್ನಾಟಕ ಮತ್ತು ಗೋವಾ ಸರ್ಕಾರಕ್ಕೆ ಧ್ವನಿ ಮುಟ್ಟಿಸುವ ಮೂಲಕ ಗೋವಾ ಕನ್ನಡಿಗರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ.