ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ‌ ಕುರಿತು ಮಾಹಿತಿ ಹಕ್ಕು ನಿಯಮದಡಿ ಕೇಳಲಾದ ಮಾಹಿತಿಯನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡುತ್ತಿಲ್ಲ. ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಭಟ್ಟ ಚಾಪೆತೋಟ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2024 ರಲ್ಲಿ ದೇಹಳ್ಳಿ ಎಸ್.ಟಿ‌ ಕಾಲೋನಿ ಕುಡಿಯುವ ನೀರು ನಿರ್ವಹಣೆ ವೆಚ್ಚ, ಎಸ್.ಟಿ ಸಮುದಾಯದವರಿಗೆ ಸೋಲಾರ್ ಲೈಟ್ ಮತ್ತು ಯುಪಿಎಸ್ ವಿತರಿಸುವ ಯೋಜನೆಯ ಅನುಷ್ಠಾನದ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಲಾಗಿತ್ತು. ಕೇವಲ ಒಂದು ಮಾಹಿತಿ ಮಾತ್ರ ನೀಡಲಾಗಿದೆ.‌ ಅದರಲ್ಲಿಯೂ ಪಿಡಿಒ ಅವರ ಸೀಲ್ ಮಾತ್ರ ಇದ್ದು, ಸಹಿ ಹಾಕಿಲ್ಲ.
ಅಪೂರ್ಣ ಮಾಹಿತಿ ನೀಡಿದ ಬಗ್ಗೆ ಮೇಲ್ಮನವಿ ಸಲ್ಲಿಸಿದಾಗಲೂ ಮತ್ತೆ ಅದೇ ಮಾಹಿತಿ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಈ ಕುರಿತು ತಾ.ಪಂ ಅಧಿಕಾರಿಗಳಿಗೆ ದೂರು ನೀಡಿದಾಗ, ಸರಿಯಾದ ಮಾಹಿತಿ ನೀಡುವಂತೆ ಪಿಡಿಒ ಅವರಿಗೆ ಸೂಚನೆ ನೀಡಿದ್ದಾರೆ. ಆದರೂ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವುದು ಖಚಿತವಾಗುತ್ತಿದೆ ಎಂದು ದೂರಿದರು.

ನಿಗದಿತ ಅವಧಿ ಮುಗಿದರೂ ಮಾಹಿತಿ ನೀಡದ ಅಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದಾಗಿ ನಾಗರಾಜ ಭಟ್ಟ ತಿಳಿಸಿದ್ದಾರೆ.