ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯ ಸರ್ಕಾರದ ವಿಮಾನಯಾನ ಇಲಾಖೆಯ ನಿವೃತ್ತ ನಿರ್ದೇಶಕರಾದ ಸುರೇಶ ಶ್ಯಾನುಭಾಗ್ ರವರ ಧಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಶ್ರೀಕ್ಷೇತ್ರ ಗುಡ್ಡಮ್ಯಾಡಿಯಲ್ಲಿ ಸಮಸ್ತ ಗ್ರಾಮಸ್ಥರ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗಿದೆ.

ಸುರೇಶ್ ಶ್ಯಾನುಭಾಗ್ ರವರು ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಬಂಟ್ವಾಡಿಯ ಶ್ರೀಮತಿ ಭಾಗೀರಥಿ ಹಾಗೂ ಶ್ರೀ ಗಣಪತಿ ಶ್ಯಾನುಭಾಗ ರವರ ಪುತ್ರರಾಗಿ 23/05/1964 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಡಿಯಲ್ಲಿಯೂ, ಪ್ರೌಢಶಾಲಾ ಶಿಕ್ಷಣವನ್ನು ಹಕ್ಲಾಡಿಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಗಂಗೊಳ್ಳಿಯಲ್ಲಿ, ಬಿಎಸ್ಸಿ ಮತ್ತು ಎಂಎಸ್ಸಿ ಪದವಿಗಳನ್ನು ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ. ಇವರು ಎಂಬಿಎ ಹಾಗೂ ಪಿಎಚ್ ಡಿ ಪದವಿಗಳನ್ನ ಪಡೆದುಕೊಂಡಿದ್ದಾರೆ. ಇವರು ಬರೆದ ಎರಡು ಪುಸ್ತಕಗಳು ಮತ್ತು ಹಲವು ಸಂಶೋಧನಾ ಲೇಖನಗಳನ್ನೂ ಬರೆದಿದ್ದಾರೆ.

ದೆಹಲಿ ಹಾಗೂ ರಾಜಸ್ಥಾನದ ಬಿಕೆನಾರ್ ನಲ್ಲಿ ಕರ್ತವ್ಯ ನಿರ್ವಹಣೆಯನ್ನು ಮಾಡಿದ ಸುರೇಶ್ ಶ್ಯಾನುಭಾಗ್ ರವರು 1993 ರಲ್ಲಿ ಗೋವಾ ರಾಜ್ಯದ ಆಡಳಿತ ವಿಭಾಗದಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿರುವ ಇವರು ಸರ್ಕಾರದ ಬಜೇಟ್ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಇವರಿಗೆ ಪುರಸ್ಕಾರಗಳು ಹುಡುಕಿಕೊಂಡು ಬಂದವು. ಗೋವಾ ರಾಜ್ಯ ಸರ್ಕಾರದಲ್ಲಿ ಅತ್ಯುತ್ತಮ ಮತ್ತು ಅರ್ಹ ಸೇವೆಗಾಗಿ ಮನ್ನಣೆಯನ್ನು ಪಡೆದು 26/01/2022 ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಗೋವಾ ರಾಜ್ಯಪಾಲರಾದ ಪಿ.ಎಸ್.ಶ್ರೀಧರನ್ ಪಿಳ್ಳೈ ರವರಿಂದ “ಗಣರಾಜ್ಯೋತ್ಸವ ಪ್ರಶಸ್ತಿ” ದೇಶದ ಸೇವೆಯಲ್ಲಿ ಅವಿರತ ಪರಿಶ್ರಮ ಹಾಗೂ ಮಹೋನ್ನತ ಕೊಡುಗೆಗಾಗಿ “ಅಶೋಕ ಪ್ರಶಸ್ತಿ-2024”, ಗ್ಲೋಬಲ್ ಹೆರಾಲ್ಡ ಸಂಸ್ಥೆಯಿಂದ ಪ್ರೈಡ್ ಆಪ್ ಇಂಡಿಯಾ-ಗೋವಾ(2023) ಪ್ರಶಸ್ತಿ. ಗೋವಾ ಸರ್ಕಾರದ “ಡೈರೆಕ್ಟರ್ ಆಫ್ ಸಿವಿಲ್ ಏವಿಯೇಶನ್ಸ” ನಿರ್ದೇಶಕರಾಗಿ” ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಗೆ ವಿಶಿಷ್ಠ ಸೇವೆ ಸಲ್ಲಿಸಿದ್ದಕ್ಕಾಗಿ  Skoh Award For Governance-Gold  ಪ್ರಶಸ್ತಿ ಹಾಗೂ  Skoch Order of Merit  (2022) ಅವಳಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದು ಗೋವಾ ರಾಜ್ಯ ಸರ್ಕಾರದ ಉನ್ನತ ಹುದ್ಧೆಯಲ್ಲಿ ಕನ್ನಡಿಗರು ಮಾಡಿದ ಸಾಧನೆಯಾಗಿದೆ.

ಅವರ ಈ ಅತ್ಯುನ್ನತ ಸಾಧನೆಗೆ ಪತ್ನಿ ಡಾ.ಅಮಿತಾ ಶ್ಯಾನುಭಾಗ್ (ಅರ್ಥಶಾಸ್ತ್ರ ಉಪನ್ಯಾಸಕಿ) ರವರು ಸಾಥ್ ನೀಡಿದ್ದಾರೆ. ಮಗಳು ಡಾ.ಕಾತ್ಯಾಶ್ರೀ(ಬಿಎಎಂಎಸ್ ಪಧವೀಧರೆ) ಮತ್ತು ಮಗ ಸುಶ್ರುತ (ಇಂಜಿನೀಯರಿಂಗ್ ವಿದ್ಯಾರ್ಥಿ) ಎಂಬ ಇಬ್ಬರು ಮಕ್ಕಳನ್ನು ಪಡೆದ ಸಾರ್ಥಕ ಸುಖಿ ಕುಟುಂಬ ಇವರದ್ದಾಗಿದೆ.

ಸರ್ಕಾರಿ ಕೆಲಸವನ್ನು ನಿಷ್ಠೆ , ಕಾಳಜಿ ಹಾಗೂ ದಕ್ಷತೆಯಿಂದ ನಿರ್ವಹಿಸಿ ದಿನಾಂಕ 31/05/2024 ರಂದು ನಿವೃತ್ತಿಯಾದರೂ, ಇವರ ಶ್ರೇಷ್ಠ ಸೇವೆಯನ್ನು ಗುರುತಿಸಿದ ಖಾಸಗಿ ಕಂಪನಿ ನಿರ್ದೇಶಕರನ್ನಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿರುವುದು ಇವರ ಸೇವಾ ಕೈಂಕರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.