ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡ ಭಾಗದಲ್ಲಿ ಕಪ್ಪು ಚಿರತೆಯೊಂದು ಓಡಾಟ ನಡೆಸಿದೆ. ಈ ಚಿರತೆ ಓಡಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.(A black leopard has roamed in Bisgod area of Yallapur taluk of Uttara Kannada district.)
ಬಿಸಗೋಡನ ಗೇರಾಳದ ಗಣೇಶ ಹೆಗಡೆ ಎಂಬುವರ ಮನೆ ಅಂಗಳಕ್ಕೆ ಬಂದ ಈ ಕಪ್ಪು ಚಿರತೆ ಅವರು ಸಾಕಿದ್ದ ನಾಯಿಯನ್ನು ತಿಂದಿದೆ. ಮನೆಯಲ್ಲಿ ಸಾಕಿದ್ದ 3 ತಿಂಗಳ ನಾಯಿ ಕಾಣೆಯಾಗಿದ್ದರಿಂದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕಪ್ಪು ಚಿರತೆಯು ಮನೆಯಂಗಳಕ್ಕೆ ಬಂದು ಇವರು ಸಾಕಿದ್ದ ನಾಯಿಯನ್ನು ಹೊತ್ತೊಯ್ದಿರುವ ದೃಶ್ಯಾವಳಿ ಸೆರೆಯಾಗಿದೆ.
ಬಿಸಗೋಡ ಸುತ್ತಮುತ್ತಲಿನ ಊರುಗಳಾದ ಸಾವಗದ್ಧೆ, ಬರಗದ್ಧೆ , ಗಾಳಿಕೇರಿ ಘಟ್ಟದ ಮೇಲಿನ ಗ್ರಿಡ್ ಲೈನ್ ಬಳಿ ಇದೇ ಕರಿ ಚಿರತೆ ಓಡಾಟ ನಡೆಸಿದೆ. ಸಂಜೆಯ ವೇಳೆ ಈ ಭಾಗದಲ್ಲಿ ಕಪ್ಪು ಚಿರತೆ ಓಡಾಟ ನಡೆಸಿರುವುದನ್ನು ಹಲವರು ಕಂಡಿದ್ದಾರೆ. ಚಿರತೆಯು ಜನವಸತಿ ಪ್ರದೇಶದಲ್ಲಿ ಓಡಾಟ ನಡೆಸಿರುವುದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ.