ಸುದ್ಧಿಕನ್ನಡ ವಾರ್ತೆ
ಪಣಜಿ: ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸುವ ವಿಮಾನ ಟಿಕೇಟ್ ದರಗಳು ಗರಿಷ್ಠ ಮಟ್ಟಕ್ಕೆ ತಲುಪಿದೆ. ಗೋವಾಕ್ಕೆ ಆಗಮಿಸುವ ವಿಮಾನಗಳು ಮತ್ತು ಹೋಟೆಲ್ ಗಳು ಭರ್ತಿಯಾಗಿದೆ. ಈ ವಿಮಾನ ಟಿಕೇಟ್ ದರ ಹೆಚ್ಚಳವು ಸರ್ಕಾರದ ಮೇಲೆ ಪರಿಣಾಮ ಬೀರಬಹುದು, ಆದರೆ ನಾವು ಈ ಬೆಲೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಗೋವಾ ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಹೇಳಿದ್ದಾರೆ.]
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಈ ವರ್ಷ ಗೋವಾಕ್ಕೆ ಭೇಟಿ ನೀಡಿದ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರ ಅಂಕಿಅಂಶಗಳು ಉತ್ತೇಜನಕಾರಿಯಾಗಿದೆ. ಆದರೆ ನಾವು ಅಂಕಿಅಂಶಗಳ ಮೇಲೆ ಮಾತ್ರ ಗನಹರಿಸುತ್ತಿಲ್ಲ. ಗೋವಾಕ್ಕೆ ಬರುವ ಪ್ರವಾಸಿಗರಿಗೆ ಎಷ್ಟು ಹಣ ಖರ್ಚಾಗುತ್ತದೆ ಎಂಬುದನ್ನೂ ನಾವು ನೋಡುತ್ತೇವೆ ಎಂದು ಸಚಿವ ರೋಹನ್ ಖಂವಟೆ ನುಡಿದರು.
ಸೋಶಿಯಲ್ ಮೀಡಿಯಾದಲ್ಲಿ ಕಾಣುವುದಕ್ಕೂ ಗೋವಾದ ವಾಸ್ತವ ಸ್ಥಿತಿಗೂ ಬಹಳ ಅಂತರವಿದೆ. ಹೋಲಿ ರೇಲಿಕ್ ದರ್ಶನ, ಇಫಿ, ಸೆರೆಂಡಿಪಿಟಿ, ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾದ ಹೋಟೆಲ್ ಗಳು ಸಂಪೂರ್ಣ ಭರ್ತಿಯಾಗಿದೆ. ಮುಂಗಡ ಕಾಯ್ದಿರಿಸಲಾಗಿದೆ. ಹೋಟೆಲ್ ಮಾಲೀಕರಿಗೆ ಉತ್ತಮ ಬಾಡಿಗೆ ಲಭಿಸಿದೆ ಎಂದು ರೋಹನ್ ಖಂವಟೆ ನುಡಿದರು.
ವಿಮಾನ ಟಿಕೇಟ್ ದರ ಮೂರು ಪಟ್ಟು ಹೆಚ್ಚಾಗಿದ್ದರೂ ವಿಮಾನಗಳು ಭರ್ತಿಯಾಗಿದೆ. ಪೂರೈಕೆ ಹೆಚ್ಚಾದಾಗ ಮತ್ತು ಬೇಡಿಕೆ ಕಡಿಮೆಯಾದಾಗ ದರಗಳು ಕಡಿಮೆಯಾಗುತ್ತದೆ. ಹಾಗಾಗಿ ಸರ್ಕಾರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸಚಿವ ರೋಹನ್ ಖಂವಟೆ ನುಡಿದರು.