ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನ ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಣಶಿ ವಲಯ ವ್ಯಾಪ್ತಿಯಲ್ಲಿ ಬರುವ ಅಣಶಿ ಗ್ರಾಮದ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ ಮೇಲೆ ಕಣಜ ಹುಳು ದಾಳಿ ಮಾಡಿದೆ. ಜೀವನ್ಮರಣ ನಡುವೆ ಹೋರಾಟ ಮಾಡುವ ಇವರಿಗೆ ಅರಣ್ಯ ಇಲಾಖೆ ಪರಿಹಾರ, ಚಿಕಿತ್ಸೆ ಹಾಗೂ ಕುಟುಂಬಕ್ಕೆ ಉದ್ಯೋಗ ಭದ್ರತೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಅಣಶಿ ಎ ಸಿ ಎಪ್ ಮೂಲಕ ಡಿಎಫ್ ಓ ದಾಂಡೇಲಿ ಹಾಗೂ ಸಿ ಸಿ ಎಪ್ ಕೆನರಾ ವೃತ್ತ ಶಿರಸಿ ರವರಿಗೆ ಮನವಿ ನೀಡಲಾಗಿದೆ.

ಕಳೆದ ಗುರುವಾರ ಅಣಶಿ ಗ್ರಾಮದ ರೈತ ಕಾಶಿನಾಥ್ ಸೋಮಣ್ಣ ಕಾಜುಗಾರ್ (60) ಇವರ ಮೇಲೆ ಕಣಜ ಹುಳು ದಾಳಿ ಮಾಡಿದೆ. ಅಲ್ಲಿಂದ ಎಂಟು ದಿನಗಳಿಂದ ಕಾರವಾರ, ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಿದರು ಪ್ರಯೋಜನ ಆಗಿಲ್ಲ. ಪ್ರಸ್ತುತ ಗೋವಾ ಜಿ ಎಮ್ ಸಿ ಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರೈತ ಕಾಶಿನಾಥ್ ಕಾಜುಗಾರಗೆ ಚಿಕಿತ್ಸೆ ವೆಚ್ಚ, ಪರಿಹಾರ ಮತ್ತು ಕುಟುಂಬಕ್ಕೆ ಉದ್ಯೋಗ ನೀಡುವ ಮೂಲಕ ಭದ್ರತೆ ನೀಡದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ್ ಗಾವಡಾ, ಮಾಜಿ ಜಿಲ್ಲಾ ಕಾರ್ಯದರ್ಶಿ ಮಹಾಬಲೇಶ್ವರ ಕಾಜುಗಾರ, ಕಾರ್ಯದರ್ಶಿ ದಯಾನಂದ ಕುಮಗಾಳಕ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಾ ಅಣಶಿಕರ, ಪ್ರಮುಖರಾದ ರಾಮಕೃಷ್ಣ ಪೆಡ್ನೇಕರ, ದಯಾನಂದ ಪಾಟ್ನೆ, ವಾಮನ ಮಿರಾಶಿ, ಕಮಲಾಕರ ಗಾಂವ್ಕರ್, ರಾಜು ನಾಯ್ಕ, ಸುರೇಶ್ ವೇಳಿಪ ಆಂಬಾಳಿ, ಮುಂತಾದವರು ಇದ್ದರು.

ಸಂಪೂರ್ಣ ವ್ಯವಸ್ಥೆ ಮಾಡುತ್ತೇವೆ.

ಈಗಾಗಲೇ ಅರಣ್ಯ ಅಧಿಕಾರಿಗಳು ರೈತರ ಮನೆಗೆ ಭೇಟಿ ನೀಡಿದ್ದಾರೆ. ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ನೊಂದ ಕುಟುಂಬಕ್ಕೆ ಪರಿಹಾರ, ಖರ್ಚು ವೆಚ್ಚ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ.

ನಿಲೇಶ್ ಶಿಂದೆ

ಡಿಎಫ್ ಓ ಕಾಳಿ ಹುಲಿ ಯೋಜನೆ ಅಣಶಿ ದಾಂಡೇಲಿ.