ಸುದ್ದಿ ಕನ್ನಡ ವಾರ್ತೆ
ಗೋವಾದ ವಾಸ್ಕೋ ನಗರದಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಬುಧವಾರ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಈ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಯಾಗುವಂತಾಗಿತ್ತು. ನಗರದ ಸಂಡೆ ಮಾರ್ಕೆಟ್ ಮತ್ತು ತಿಲಕ್ ಮೈದಾನದ ಹಿಂದೆ ಇರುವ ಕಾರು ಪರಿಕರಗಳ ಅಂಗಡಿಗೆ ಬೆಂಕಿ ಹತ್ತಿ ಉರಿದಿದೆ. ಈ ಹಠಾತ್ ಅಗ್ನಿ ಅವಘಡ ಸ್ಥಳೀಯ ನಾಗರಿಕರಲ್ಲಿ ಭೀತಿ ಹುಟ್ಟಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಅನುಸಾರ- ವಾಸ್ಕೋ ನಗರದಲ್ಲಿರುವ ತಿಲಕ್ ಮೈದಾನದ ಹಿಂದೆ ಇರುವ ಕಾರು ಪರಿಕರಗಳ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷದಲ್ಲಿ ಈ ಬೆಂಕಿ ಹಿಂಸಾತ್ಮಕ ರೂಪ ಪಡೆದು ಇಡೀ ಅಂಗಡಿಗೆ ಸುಟ್ಟು ಬಸ್ಮವಾಗಿದೆ. ಅಂಗಡಿಯ ಹೊರಗೆ ನಿಲ್ಲಿಸಿದ್ದ ಎರಡು ಕಾರು ಕೂಡ ಬೆಂಕಿಗೆ ಆಹುತಿಯಾಗಿದೆ.
ಮತ್ತೊಂದೆಡೆಗೆ ಬುಧವಾರ ರಾತ್ರಿ ವಾಸ್ಕೋ ದ ಸಂಡೆ ಮಾರ್ಕೆಟ್ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆ ಸಂಭವಿಸುತ್ತಿದ್ದಂತೆ ಅಲ್ಲಿದ್ದ ಜನರೆಲ್ಲ ಒಂದೇ ಬಾರಿ ಭೀತಿಯಿಂದ ಓಡಲು ಪ್ರಾರಂಭಿಸಿದರು. ಕೆಲಕಾಲ ಈ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಘಟನೆಯ ಮಾಹಿತಿ ಲಭ್ಯವಾದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಘಟನಾ ಸ್ಥಳಗಳಿಗೆ ಧಾವಿಸಿ ಕಾರ್ಯಾಚರಣೆ ಕೈಗೊಂಡರು. ಪೊಲೀಸರು ಸಹ ಘಟನಾ ಸ್ಥಳಕ್ಕೆ ಧಾವಿಸಿ, ಜನಸಂದಣಿಯನ್ನು ನಿಯಂತ್ರಿಸಿದರು. ಅಗ್ನಿಶಾಮಕದಳದ ಸತತ ಕಾರ್ಯಾಚರಣೆಯ ಮೂಲಕ ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಮತ್ತು ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಈ ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನು ಸ್ಪಷ್ಟವಾಗಿಲ್ಲ. ಕಾರು ಪರಿಕರಗಳ ಅಂಗಡಿಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಈ ಅಂಗಡಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಪಾರ ಹಾನಿ ಸಂಭವಿಸಿದೆ.
ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ವಾಸ್ಕೋ ಶಾಸಕ ದಾಜಿ ಸಾಲ್ಕರ್ ಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.
