ಸುದ್ದಿ ಕನ್ನಡ ವಾರ್ತೆ

ಶಿರಸಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ʼಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆಂಡ್‌ ಕ್ಯಾನ್ಸರ್‌ ಅವರು ನೀಡಿದ ಅಡಿಕೆ ಕ್ಯಾನ್ಸರ್ ಕಾರಕ ಎಂಬ ಹೇಳಿಕೆ ಆಧಾರವಿಲ್ಲದ್ದು ಹಾಗೂ ಅವೈಜ್ಞಾನಿಕ ವರದಿಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ.

ಈಗಾಗಲೇ ಕ್ಯಾಂಪ್ಕೋ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಿಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಿಕೆಯು ಕ್ಯಾನ್ಸರ್‌ ಕಾರಕವಲ್ಲ ಎಂಬ ವರದಿಯನ್ನು ನೀಡಿದೆ. ಔಷಧೀಯ ಗುಣಗಳು ಸಹ ಅಡಕೆಯಲ್ಲಿರುವ ಬಗ್ಗೆ ಉಲ್ಲೇಖಿಸಿರುತ್ತಾರೆ. ಇಂತಹ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಂಗಸಂಸ್ಥೆಯು ವರದಿ ನೀಡಿರುವುದು ಸಮಂಜಸವೆನಿಸುವುದಿಲ್ಲ. ಈ ವಿಷಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಡಬ್ಲೂಎಚ್ಓ ಸಂಸ್ಥೆಗೆ ತಿಳಿಸುವ ಮತ್ತು ಅವರಿಗೆ ಮನವರಿಕೆಯನ್ನೂ ಸಹ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆಯಲ್ಲಿದ್ದು ಪೂಜನೀಯ ಸ್ಥಾನದಲ್ಲಿದೆ. ತಂಬಾಕು ಬೇರ್ಪಟ್ಟ ಅಡಿಕೆ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವುದು ಅನೇಕ ಸಂಶೋಧನೆಗಳಿಂದ ಹಾಗೂ ವೈಜ್ಞಾನಿಕವಾಗಿಯೂ ದೃಡಪಟ್ಟಿದೆ. ಈ ಅಂಶಗಳನ್ನು ಮತ್ತು ವೈಜ್ಞಾನಿಕ ಸಂಶೋದನೆಯ ಅಂಶಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದು ಇರುತ್ತದೆ ಎಂದಿದ್ದಾರೆ.

ಈ ವಿಷಯಗಳ ಬಗ್ಗೆ ಸರಕಾರಿ ಮಟ್ಟದಲ್ಲೂ ಸಹ ಗಂಭೀರವಾಗಿ ಪ್ರಯತ್ನಿಸುವಂತೆ ಸಂಬಂಧಪಟ್ಟ ಸಚಿವರುಗಳಿಗೆ ಹಾಗೂ ಇಲಾಖೆಯ ಮುಖ್ಯಸ್ಥರುಗಳಿಗೆ ಮನವರಿಕೆ ಮಾಡುವ ಕುರಿತು ಮುಂದಾಗಿದ್ದೇವೆ. ಇನ್ನು ಮುಂದೆಯು ಸಹ ಈ ಕುರಿತು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದಿದ್ದಾರೆ.

ಈಗಾಗಲೇ ಕ್ಯಾಂಪ್ಕೋ ಸೇರಿದಂತೆ ರಾಜ್ಯದ ಪ್ರಮುಖ ಸಹಕಾರಿ ಸಂಘಗಳು ಮತ್ತು ಸಂಶೋದನಾ ಸಂಸ್ಥೆಗಳು ಅಡಿಕೆ ಬೆಳೆಗಾರರ ಹಿತರಕ್ಷಣೆ ಕುರಿತಂತೆ ಸಕ್ರಿಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಲ್ಲಿ ಪಾಲ್ಗೋಳ್ಳುವಿಕೆ ಅತೀ ಮುಖ್ಯವಾಗಿದೆ.

ಆಗಾಗ ಅಡಿಕೆ ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಇಂತಹ ಷಡ್ಯಂತ್ರಗಳನ್ನು ತಡೆಯಲು ಕೇಂದ್ರ ಹಣಕಾಸು, ವಾಣಿಜ್ಯ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಗತ್ಯವಾದ ಎಲ್ಲಾ ಕ್ರಮಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ. ರೈತರು ಭಯಭೀತರಾಗುವ ಅಗತ್ಯವಿಲ್ಲ‌ ಎಂದೂ ಹೇಳಿದ್ದಾರೆ.

ದೇಶದಲ್ಲಿಯೇ ಕರ್ನಾಟಕವು ಅತಿಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದ್ದು, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮುಖ್ಯಮಂತ್ರಿಗಳಿಗೆ‌‌ ಕೂಡ‌ ಕಾಗೇರಿ ಆಗ್ರಹಿಸಿದ್ದಾರೆ.