ಸುದ್ಧಿಕನ್ನಡ ವಾರ್ತೆ
ಪಣಜಿ: ಓಮನ್ ನಲ್ಲಿ ಮನೆ ಕೆಲಸ ಕೊಡಿಸುವುದಾಗಿ ಹೇಳಿ ಮೋಸವೆಸಗಿದ ಘಟನೆ ಗೋವಾದ ವಾಸ್ಕೊದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ಕೊದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಮಹಿಳೆಯನ್ನು ಮಸ್ಕತ್ ಓಮನ್ ನಲ್ಲಿ ಮನೆ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಅಲ್ಲಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ಶಾರೀರಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಮಹಿಳೆ ಪೋಲಿಸ್ ದೂರಿನಲ್ಲಿ ಹೇಳಿದ್ದಾರೆ.

ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಶೇಖ್ (35, ಬೈನಾ ವಾಸ್ಕೊ), ಮಸ್ಕತ್ ಖಾನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಸದರಿ ಮಹಿಳೆಗೆ ಮಸ್ಕತ್ ನಲ್ಲಿ ಕೆಲಸ ಕೊಡಿವುದಾಗಿ ಹೇಳಿ ಸುಳ್ಳು ಭರವಸೆ ನೀಡಿದ್ದರು ಎನ್ನಲಾಗಿದೆ. ಮಸ್ಕತ್ ತಲುಪಿದ ಕೂಡಲೆ ಮೊದಲ ವೇತನ ನೀಡಲಾಗುವುದು ಎಂಬ ಭರವಸೆಯನ್ನೂ ಇವರು ನೀಡಿದ್ದರು ಎನ್ನಲಾಗಿದೆ.

ಮಸ್ಕತ್ ತಲುಪಿದ ನಂತರ ಅಲ್ಲಿ 11 ಜನ ಭಾರತೀಯ ಮಹಿಳೆಯರು ಇದ್ದ ಪ್ಲ್ಯಾಟ್ ಗೆ ಕಳುಹಿಸಲಾಯಿತು. ಕೆಲ ದಿನಗಳ ನಂತರ ಶೇಖ್ ಎಂಬುವರ ಮನೆಗೆ ಕಳುಹಿಸಲಾಯಿತು. ಅಲ್ಲಿ ಶಾರೀರಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಮಹಿಳೆ ದೂರಿದ್ದಾಳೆ.

ಈ ದೂರಿನ ಆಧಾರದ ಮೇಲೆ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಓಮನ್ ನಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಗೋವಾ ಪೋಲಿಸರು ಪತ್ರ ಬರೆದಿದ್ದು ಅಲ್ಲಿರುವ ಭಾರತೀಯ ಇತರ ಮಹಿಳೆಯರನ್ನೂ ಬಿಡುಗಡೆ ಮಾಡುವಂತೆಯೂ ಮನವಿ ಮಾಡಿದ್ದಾರೆ.
ನೌಕರಿಯ ಆಮಿಷವೊಡ್ಡುವ ಇಂತವರ ಕೃತ್ಯಕ್ಕೆ ಬಲಿಯಾಗದಂತೆ ಪೋಲಿಸರು ಎಚ್ಚರಿಕೆ ನೀಡಿದ್ದಾರೆ.