ಸುದ್ಧಿಕನ್ನಡ ವಾರ್ತೆ
Goa: 2011 ರಲ್ಲಿ ಗೋವಾದ ಬಾಳ್ಳಿಯಲ್ಲಿ ನಡೆದ ಆಂದೋಲನದ ಸಂದರ್ಭದಲ್ಲಿ ಇಬ್ಬರು ಆದಿವಾಸಿಗಳ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಪೈಕಿ ವಿದೇಶಕ್ಕೆ ಪರಾರಿಯಾಗಿದ್ದ ವರಕತ್ ಅಲಿ (47) ಎಂಬ ಆರೋಪಿಯನ್ನು ಸಿಬಿಐ ಗೋವಾ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. 2015 ರಲ್ಲಿ ಈ ಶಂಕಿತ ಆರೋಪಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.
ಮೇ 25, 2011 ರಂದು ಬಾಳ್ಳಿ ಕಾಣಕೋಣನಲ್ಲಿನ ಬುಡಕಟ್ಟು ಆಂದೋಲನವು ಹಿಂಸಾತ್ಮಕ ತಿರುವು ಪಡೆದುಕೊಂಡಿತ್ತು. ಮಂಗೇಶ್ ಗಾವ್ಕರ್ (ಕಾಣಕೋಣ) ಮತ್ತು ದಿಲೀಪ್ ವಾರಿಪ್ (ಕೆಪೆ) ಈ ಇಬ್ಬರು ಆಂದೋಲನದಲ್ಲಿ ಬೆಂಕಿಗೆ ಸುಟ್ಟು ಕರಕಲಾದವರು. ಈ ಪ್ರಕರಣದಲ್ಲಿ ಗೋವಾ ಪೊಲೀಸರು 14 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣವನ್ನು ಫೆಬ್ರವರಿ 2012 ರಲ್ಲಿ ಸಿಬಿಐಗೆ ವರ್ಗಾಯಿಸಲಾಯಿತು. ತನಿಖೆಯ ನಂತರ, ಸಿಬಿಐ ಅಪರಾಧ ನರಹತ್ಯೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಹೊಸ ಚಾರ್ಜ್ ಶೀಟ್ ಸಲ್ಲಿಸಿತ್ತು.