ಸುದ್ಧಿಕನ್ನಡ ವಾರ್ತೆ
Goa (Panaji): ಗೋವಾದ ಪರ್ವರಿಯಲ್ಲಿ ಭಾನುವಾರ ಗೋವಾದ ಎಲ್ಲ ಕನ್ನಡ ಸಂಘಟನೆಗಳೂ ಒಗ್ಗೂಡಿ ಆಯೋಜಿಸಿದ್ದ 69 ನೇಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದು ತನ್ನ ಕಲಿಯುಗ ಕುಡುಕ ನಾಟಕದ ಡೈಲಾಗ್ ಹೇಳುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಅಂಜಿಸಿದರು.

ಗೋವಾದಲ್ಲಿ ಎಲ್ಲ ಕನ್ನಡ ಸಂಘಟನೆಗಳೂ ಇಷ್ಟೊಂದು ಸುಂದರವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರುವುದಕ್ಕೆ ರಾಜು ತಾಳಿ ಕೋಟಿ ಅಭಿನಂದನೆ ಸಲ್ಲಿಸಿದರು. ರಾಜು ತಾಳಿಕೋಟಿ ರವರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆಯೇ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು. ರಾಜು ತಾಳಿಕೋಟಿ ರವರು ಜನಮನಗೆದ್ದ ನಾಟಕ ಕಲಿಯುಗ ಕುಡುಕ ನಾಟಕದ ಡೈಲಾಗ್ ಹೇಳಿ ಪ್ರೇಕ್ಷಕರನ್ನು ರಂಜಿಸಿದರು.

ಸಭಾ ಕಾರ್ಯಕ್ರಮದ ನಂತರ ರಾಜು ತಾಳಿಕೋಟಿ ರವರು ವೇದಿಕೆಯಿಂದ ಕೆಳಕ್ಕಿಳಿಯುತ್ತಿದ್ದಂತೆಯೇ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಪ್ರೇಕ್ಷಕರು ಮುಗಿಬಿದ್ದರು. ತಮ್ಮ ಅಭಿಮಾನಿಗಳನ್ನು ನಿರಾಸೆ ಮಾಡದೆಯೇ ತಾಳಿಕೋಟಿ ರವರು ಎಲ್ಲರೊಂದಿಗೆ ಪ್ರೀತಿಯಿಂದ ಪೋಟೊಕ್ಕೆ ಪೋಸ್ ಕೊಟ್ಟರು. ಇದರಿಂದಾಗಿ ವೇದಿಕೆಯ ಮಂಟಪದಿಂದ ಹೊರಕ್ಕೆ ಬರಬೇಕಾದರೆ ಹೆಚ್ಚಿನ ಸಮಯ ಹಿಡಿಯಿತು. ಗೋವಾದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ತಮ್ಮ ಅಭಿಮಾನಿಗಳನ್ನು ಕಂಡು ತಾಳಿಕೋಟಿ ರವರು ಸಂತಸ ವ್ಯಕ್ತಪಡಿಸಿದರು.