ಸುದ್ಧಿಕನ್ನಡ ವಾರ್ತೆ
Goa: ‘ಭಾಷೆಯಿಂದ ಬರಿಭಾಷೆ ಉಳಿಯುವುದು ಬೆಳೆಯುವುದಷ್ಟೆ ಅಲ್ಲದೆ ಅದರಿಂದ ಸಂಸ್ಕಾರ ಮತ್ತು ಸಂಸ್ಕøತಿಗಳೆರಡು ತಂದೆ ತಾಯಿಯರಿಂದ ಮಕ್ಕಳಿಗೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹಸ್ತಾಂತರವಾಗುತ್ತದೆ. ಹೀಗಾಗಿ ಹೊರನಾಡಲ್ಲಿದ್ದು ಭಾಷಾಭಿಮಾನವನ್ನಿಟ್ಟು ಕೊಳ್ಳುವುದರ ಜೊತೆಗೆ ಮಕ್ಕಳಿಗೆ ಭಾಷೆಯನ್ನು ಕಲಿಸಿ, ಉಳಿಸಿ ಮತ್ತು ಬೆಳೆಸಿ ಎಂದು ಚಕ್ರವರ್ತಿ ಸೂಲಿಬೆಲೆ ರವರು ಕಿವಿ ಮಾತು ಹೇಳಿದರು.

ಗೋವಾದ ಪೋಂಡಾ ಶಹರದ ಸಾವಿತ್ರಿ ಸಭಾಂಗಣದಲ್ಲಿ ಶೈಲೇಶ ಪಾಟೀಲರ ಸಾರತ್ಯದಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಮಾರಂಭದ ಉಧ್ಘಾಟನೆ ನೆರವೇರಿಸಿ ಚಕ್ರವರ್ತಿ ಸೂಲಿಬೆಲೆ ರವರು ಮಾತನಾಡುತ್ತಿದ್ದರು. ‘ಇಲ್ಲಿ ನೆರೆದವರೆಲ್ಲ ಯಾವ ಜಾತಿ, ಧರ್ಮ, ಕುಲ, ಗೋತ್ರ ಹಿಡಿದು ಇಲ್ಲಿಗೆ ಬರಲಿಲ್ಲ, ಯಾವುದಾದರೂ ಶಕ್ತಿ ಅವರನ್ನು ಕರೆ ತಂದಿದ್ದರೆ ಅದು ನಮ್ಮ ತಾಯಿ ಭಾಷೆ ಕನ್ನಡ. ಇದು ನಮ್ಮನ್ನೆಲ್ಲ ಒಗ್ಗೂಡಿಸುವ ಶಕ್ತಿ ಕೇಂದ್ರವಾಗಿದೆ’ ಎಂದರು. ಇತಿಹಾಸದ ಪುಟಗಳಿಂದ ಆಯ್ದ ಕೆಲ ಘಟನೆಗಳನ್ನು ನೆನಪಿಸಿ ಕನ್ನಡಾಭಿಮಾನ ಮತ್ತು ನಾಡಪ್ರೇಮವನ್ನು ಚಕ್ರವರ್ತಿ ಸೂಲಿಬೆಲೆ ರವರು ಇನ್ನೂ ಗಟ್ಟಗೊಳಿಸಿದರು.

ಕಾರ್ಯಕ್ರಮದ ಎರಡನೇ ಭಾಗದ ಅಧ್ಯಕ್ಷತೆಯನ್ನು ಎಮ್ ಎಸ್ ಕೃಪಾಶಂಕರ, ಪ್ರಾಂಶುಪಾಲರು, ಸರಕಾರಿ ಇಂಜಿನಿಯರಿಂಗ್ ಕಾಲೇಜ್, ಫರ್ಮಾಗುಡಿ-ಪೋಂಡಾ ಇವರು ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಸಂಘದ ಖಜಾಂಚಿ ಶಿರಗಣ್ಣವರ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೊದಲ ಭಾಗದಲ್ಲಿ ದಾನಮ್ಮರವರ ಸ್ವಾಗತ ಗೀತೆ ಮತ್ತು ಶರಣು ಯಮನೂರರವರ ಹಾಸ್ಯ ಕಾರ್ಯಕ್ರಮ ಜರುಗಿತು. ಸುರೇಶ ಹಡಪದ, ಶ್ರೀನಿವಾಸ ಕಳಗಿ ಮತ್ತು ರಾಘವೇಂದ್ರ ಕಂಚಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಸಿದ್ಧು ಹಿರೇಮಠ, ವಿರೂಪಾಕ್ಷ ತೊಂಡೆಹಾಳ, ಸಂದೀಪ ನಾಯಕ, ರಜತ್ ಶೆಟ್ಟಿ, ರಾಘವೇಂದ್ರ ಕಂಚಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ ರೆಡ್ಡಿ, ಶ್ರೀನಿವಾಸ ಬಳಗಟ್ಟಿ, ಸಂಜಯ ಶಿರಗಣ್ಣವರ್, ಶ್ರೀನಿವಾಸ ಕಲಗಿ, ಸುರೇಶ ಕಣವಿ, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಎರಡನೆಯ ಭಾಗವು ವಿಜಯಲಕ್ಷ್ಮಿ ಅವರ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು. ಪೋಂಡಾ ಕನ್ನಡ ಸಂಘದ ಅಧ್ಯಕ್ಷ ಶೈಲೇಶ ಪಾಟೀಲ ಅವರು ಅತಿಥಿಗಳ ಸ್ವಾಗತ ಕೋರಿದರು. ದಾನಮ್ಮಾ ಹಾಗೂ ಸಂಗಡಿಗರು ನಾಡಗೀತೆಯನ್ನು ಹೇಳಿದರು. ರೇವಣಸಿದ್ಧಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು,ಪ್ರಿಯಾ ಪತ್ತಾರ ಅತಿಥಿಗಳನ್ನು ಪರಿಚಯಿಸಿದರು.ಶರಣು ಯಮನೂರು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು, ಸಂಘದ ಸಚಿವ ಶ್ರೀನಿವಾಸ ಕಂಚಿಯವರು ವಂದನಾರ್ಪನೆ ಸಲ್ಲಿಸಿದರು.

ಕುಮಾರಿ ಪ್ರೀಯಾ, ಮಹಾಲಕ್ಷ್ಮಿ ಹಾಗೂ ಪವನ ಅವರು ಕಾರ್ಯಕ್ರಮ ನಡೆಸಿ ಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸಮಾರಂಭದಲ್ಲಿ ಪೊಂಡಾ ಕನ್ನಡ ಸಂಘದ ಹಿಂದಿನ ಎಲ್ಲ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.