ಸುದ್ದಿ ಕನ್ನಡ ವಾರ್ತೆ
​ಬೆಂಗಳೂರು: ರಾಜ್ಯ ಸರ್ಕಾರವು ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಪಡೆಯಲು ಅಧಿಕೃತ ಕೇಂದ್ರಗಳಲ್ಲಿ ವಿಧಿಸಲಾಗುವ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ ದರಗಳು ಆ. 15ರಿಂದ ಜಾರಿಗೆ ಬಂದಿವೆ.

 

ಪರಿಷ್ಕೃತ ಶುಲ್ಕದಂತೆ ದ್ವಿಚಕ್ರ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಪರೀಕ್ಷಾ ಶುಲ್ಕವನ್ನು 65 ರೂ.ನಿಂದ 80 ರೂ.ಗೆ ಹೆಚ್ಚಿಸಲಾಗಿದೆ. ಆಟೋ ರಿಕ್ಷಾಗಳ ಶುಲ್ಕ 75 ರೂ.ನಿಂದ 80 ರೂ.ಗೆ ಏರಿಕೆಯಾಗಿದೆ. ವರದಿಗಳ ಪ್ರಕಾರ, ಪೆಟ್ರೋಲ್, ಎಲ್‌ಪಿಜಿ ಮತ್ತು ಸಿಎನ್‌ಜಿ ಚಾಲಿತ ಕಾರುಗಳ ಪರೀಕ್ಷಾ ಶುಲ್ಕವನ್ನು 115 ರೂ.ನಿಂದ 150 ರೂ.ಗೆ ಹೆಚ್ಚಿಸಲಾಗಿದೆ. ಡೀಸೆಲ್ ಚಾಲಿತ ವಾಹನಗಳ ಶುಲ್ಕ 160 ರೂ.ನಿಂದ 200 ರೂ.ಗೆ ಹೆಚ್ಚಿಸಲಾಗಿದೆ.

 

​ಈ ಸಂಬಂಧ ರಾಜ್ಯ ಸರ್ಕಾರವು ಆ. 13ರಂದು ಆದೇಶ ಹೊರಡಿಸಿದ್ದು, ಸಾರಿಗೆ ಆಯುಕ್ತರು ಹಾಗೂ ರಸ್ತೆ ಸುರಕ್ಷತಾ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆ ಆಧಾರದ ಮೇಲೆ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಅಸ್ತಿತ್ವದಲ್ಲಿದ್ದ ಶುಲ್ಕವನ್ನು ಪರಿಷ್ಕರಿಸುವಂತೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ಸ್ ಓನರ್ಸ್ ಅಸೋಸಿಯೇಷನ್ ಮನವಿ ಮಾಡಿತ್ತು. ಸಂಘದ ಮನವಿಯ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

 

ಈ ಪ್ರಮಾಣಪತ್ರ ಸಾಮಾನ್ಯವಾಗಿ ಆರು ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ. ಆದರೆ ಬಿಎಸ್-IV ಮತ್ತು ಬಿಎಸ್-VI ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿರುವ ವಾಹನಗಳಿಗೆ ಅನ್ವಯಿಸುವ ನಿಯಮಗಳ ಪ್ರಕಾರ ಒಂದು ವರ್ಷದವರೆಗೆ ಮಾನ್ಯತೆ ದೊರೆಯಲಿದೆ.