ಸುದ್ಧಿಕನ್ನಡ ವಾರ್ತೆ
Goa(Panaji): ಪೊಲೀಸ್ ಪೇದೆ ಪ್ರಥಮೇಶ್ ಗಾವ್ಡೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಬ್ಬರು ಮಹಿಳಾ ಕಾನ್‍ಸ್ಟೆಬಲ್‍ಗಳಾದ ಪ್ರೀತಿ ಚವಾಣ್ (23) ಮತ್ತು ತನಿಷ್ಕಾ ಚವಾಣ್ (21) ಕೊಲ್ವಾಲ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳಾ ಕೈದಿಗಳಿಗೆ ಮೀಸಲಾದ ಸೆಲ್‍ನ ಛಾವಣಿಯ ಮೇಲಿದ್ದ ನೀರಿನ ಟ್ಯಾಂಕ್‍ನಿಂದ ಜಿಗಿದಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉತ್ತರ ಗೋವಾ ಪೊಲೀಸ್ ಸೇವೆಯಿಂದ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ. ಈ ಸಂಬಂಧ ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಗುರುವಾರ ಬೆಳಗ್ಗೆ 10.55ರ ಸುಮಾರಿಗೆ ಈ ಘಟನೆ ನಡೆದಿದೆ. ಬೆಳಗ್ಗೆ ಇಬ್ಬರನ್ನೂ ಜೈಲಿನ ಮಹಿಳಾ ಸೆಲ್‍ನಿಂದ ಹೊರಗೆ ಕರೆದೊಯ್ಯಲಾಯಿತು. ಈ ಸೆಲ್‍ನ ಗೇಟ್‍ನಿಂದ ಇಬ್ಬರೂ ಛಾವಣಿಯ ಮೇಲಿದ್ದ ನೀರಿನ ತೊಟ್ಟಿಯ ಮೇಲೆ ಹತ್ತಿ ಅಲ್ಲಿಂದ ಕೈಕೈ ಹಿಡಿದು ಜಿಗಿದಿದ್ದಾರೆ. ಈ ಅಂತರವು ಸುಮಾರು ಮೂರು ಮೀಟರ್ ಎತ್ತರವಾಗಿತ್ತು, ಇದರಿಂದಾಗಿ ಇಬ್ಬರಿಗೂ ಗಂಭೀರ ಗಾಯಗಳಾಗಿಲ್ಲ.
ಜೈಲು ಸಿಬ್ಬಂದಿ ಕೂಡಲೇ ಇಬ್ಬರನ್ನೂ ಜೈಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಲ್ಲಿಂದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ಕೈಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಇಬ್ಬರ ಆರೋಗ್ಯ ಸ್ಥಿರವಾಗಿದೆ. ಘಟನೆಯ ಸ್ವರೂಪ ಬೆಳಕಿಗೆ ಬಂದ ಕೂಡಲೇ ಕಾರಾಗೃಹದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಕ್ಟೋಬರ್ 25, 2024 ರಂದು ಪೊಲೀಸ್ ಕಾನ್ಸ್‍ಟೇಬಲ್ ಪ್ರಥಮೇಶ್ ಗಾವ್ಡೆ ಜುವಾರಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಮೃತ ಪ್ರಥಮೇಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತ ಆರೋಪಿಗಳಾದ ಪ್ರೀತಿ ಮತ್ತು ತನಿಷ್ಕಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಇಬ್ಬರನ್ನೂ ಬಂಧಿಸಲಾಗಿತ್ತು. ನ್ಯಾಯಾಲಯದ ಆದೇಶದಿಂದ ಮಂಗಳವಾರ ನವೆಂಬರ್ 5 ರಂದು ಕೊಲ್ವಾಳ ಜೈಲಿಗೆ ಕಳುಹಿಸಲಾಯಿತು.
ಶಂಕಿತರಾದ ಪ್ರೀತಿ ಚವಾಣ್ ಮತ್ತು ತನಿಷ್ಕಾ ಚವಾಣ್ ಇಬ್ಬರೂ ಸೋದರ ಸಂಬಂಧಿಗಳಾಗಿದ್ದು, ಪ್ರಸ್ತುತ ಅವರು ಅಗಶಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಗಳಾಗಿ ಸೇವೆ ಸಲ್ಲಿಸುತ್ತಿದ್ದರು. ನಮ್ಮದೇನೂ ತಪ್ಪಿಲ್ಲ. ಈ ವಿಚಾರದಲ್ಲಿ ನಮ್ಮನ್ನು ಸಿಲುಕಿಸಲು ಯತ್ನಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಶಂಕಿತ ಆರೋಪಿಗಳು ನಾವು ಅಮಾಯಕರು ಎಂದು ಹೇಳಿಕೊಂಡಿದ್ದಾರೆ.