ಸುದ್ಧಿಕನ್ನಡ ವಾರ್ತೆ
ಪಣಜಿ:ಈ ಬಾರಿಯ ದೀಪಾವಳಿಯಲ್ಲಿ ಮಳೆಯಿಂದಾಗಿ ಉತ್ಸಾಹ ಕಳೆಗಟ್ಟಿದ್ದರೂ ರಾಜ್ಯದ ನಗರ, ಗ್ರಾಮಗಳಲ್ಲಿ ನರಕಾಸುರನನ್ನು ಪ್ರದರ್ಶಿಸಲು ಯುವಕರು ಉತ್ಸಾಹ ತೋರಿದ್ದಾರೆ. ಎಲ್ಲೆಂದರಲ್ಲಿ ಯುವಕರ ಬಳಗ ಹಾಗೂ ಮಕ್ಕಳು ನರಕಾಸುರನ ಪ್ರತಿಕ್ರತಿ ತಯಾರಿಸುವ ಕೆಲಸ ನಡೆಯುತ್ತಿದ್ದು, ಕೆಲವೆಡೆ ನರಕಾಸುರ ಪ್ರತಿಕ್ರತಗಳು ಅಂತಿಮ ಹಂತ ತಲುಪಿವೆ. ಈ ವರ್ಷ ಮಳೆಯಿಂದಾಗಿ ಯುವಕರು ವಾಟರ್ ಪ್ರೂಫ್ ಪೈಂಟ್ ಹಾಕಿ ನರಕಾಸುರನ ನಿರ್ಮಾಣಕ್ಕೆ ಹೊಸ ಯೋಜನೆ ರೂಪಿಸಿದ್ದಾರೆ. ಹಾಗಾಗಿ ಈ ನರಕಾಸುರರ ಮೇಲೆ ಮಳೆಯ ಪರಿಣಾಮವೇನೂ ಆಗಲ್ಲ.
ಸೋಮವಾರ ರಾತ್ರಿ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದಂತೆ ಯುವಕರು ನರಕಾಸುರನ ಪ್ರತಿಕ್ರತಿಯನ್ನು ರಕ್ಷಿಸಲು ಮುಗಿಬಿದ್ದರು. ನರಕಾಸುರನನ್ನು ಮಾಡಲು ಮಕ್ಕಳು ತುಂಬಾ ಶ್ರಮಿಸಿದ್ದರು. ಆದರೆ ಮಳೆ ಅವರ ಶ್ರಮವನ್ನು ಹಾಳು ಮಾಡಿತು. ಈ ಮಳೆಯಿಂದಾಗಿ ದೀಪಾವಳಿಗೆ ಮುನ್ನವೇ ನರಕಾಸುರನ ಅಂತ್ಯ ಕಾಣುತ್ತೇನೋ ಎಂಬ ಭಯ ಮಕ್ಕಳಿಗಿತ್ತು. ಆದರೆ, ಪಟ್ಟು ಬಿಡದ ಮಕ್ಕಳು ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಬಂದು ಮತ್ತೆ ನರಕಾಸುರನ ನಿರ್ಮಾಣ ಮುಂದುವರೆಸಿದರು.
ಬುಧವಾರ ರಾತ್ರಿ ನರಕಾಸುರನ ಪ್ರತಿಕೃತಿಯ ಪ್ರದರ್ಶನ ಗೋವಾದ ಗಲ್ಲಿಗಲ್ಲಿಯಲ್ಲಿ ನಡೆಯಲಿದೆ. ಗುರುವಾರ ಬೆಳಗಿನ ಜಾವ ನರಕಾಸುರನ ದಹನ ನಡೆಯಲಿದೆ. ನರಕಾಸುರನ ದಹನದ ನಂತರ ಅಭ್ಯಂಗ ಸ್ನಾನ ಮಾಡಿ ದೀಪಾವಳಿ ಹಬ್ಬದ ಆಚರಣೆ ನಡೆಯಲಿದೆ.