ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಲವೆಡೆ ತಮ್ಮ ಕಛೇರಿಯಿದೆ ಎಂದು ಹೇಳುತ್ತ ಇಬ್ಬರು ಯುವಕರು ಗೋವಾದ ಕಾಣಕೋಣ ತಾಲೂಕಿನಲ್ಲಿ ಮನೆ ಮನೆಗೆ ತಿರುಗುತ್ತ ಚಿತ್ರೀಕರಣ ಮಾಡುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಂತೆ ಸ್ಥಳೀಯ ಪಂಚಾಯತ ಸದಸ್ಯ ಸತೀಶ ಪೈಂಗಿಣಕರ್ ರವರು ಕಾಣೋಣ ತಾಲೂಕಿನಲ್ಲಿ ದೂರು ಸಲ್ಲಿಸಿದ್ದಾರೆ. ಅಂತೆಯೇ ಪೋಲಿಸರಿಗೆ ನೀಡಿರುವ ದೂರಿನಲ್ಲಿ ಶಂಕಿತರ ಛಾಯಾಚಿತ್ರ ಹಾಗೂ ಬೈಕ್ ಚಿತ್ರವನ್ನೂ ಸೇರಿಸಲಾಗಿದೆ.

ಕೌನ್ಸಿಯಸ್ ಎಂಜಿನಿಯರಿಂಗ್ ಸರ್ವಿಸ್, ಸೂರತ್, ಗುಜರಾತ್, ನಲ್ಲಿ ನಮ್ಮ ಮುಖ್ಯ ಕಾರ್ಯಾಲಯವಿದೆ, ಗೋವಾದ ದೋನಾಪಾವುಲ್, ತಿಸವಾಡಿ, ಯಲ್ಲಿ ನಮ್ಮ ಶಾಖೆಯಿದೆ ಎಂದು ಹೇಳಿಕೊಂಡು ಮನೆ ಮನೆಗೆ ತೆರಳಿ ಚಿತ್ರೀಕರಣ ಮಾಡುತ್ತಿರುವ ಈ ಇಬ್ಬರು ಯುವಕರ ವಿರುದ್ಧ ಪೋಲಿಸ್ ದೂರು ನೀಡಿದ ನಂತರ ಪೋಲಿಸ್ ನಿರೀಕ್ಷಕ ಹರೀಶ್ ದೇಸಾಯಿ ರವರು ಈ ಯುವರನ್ನು ಹಿಡಿಯಲು ಧಾವಿಸಿದರಾದರೂ ಅಷ್ಟರಲ್ಲೇ ಆ ಇಬ್ಬರೂ ಯುವಕರನ್ನು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಇಬ್ಬರೂ ಯುವಕರು ಅಪರಿಚಿತರಾಗಿದ್ದು ಇವರು ಯಾತಕ್ಕಾಗಿ ಚಿತ್ರೀಕರಣ ಮಾಡುತ್ತಿದ್ದರು..? ಎಂಬುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಇಂತಹ ಅಪರಿಚಿತ ವ್ಯಕ್ತಿಗಳನ್ನು ಯಾರೂ ಹತ್ತಿರ ಸೇರಿಸಿಕೊಳ್ಳಬಾರದು ಎಂದು ಪೋಲಿಸರು ಎಚ್ಚರಿಕೆ ನೀಡಿದ್ದಾರೆ.