ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಗಳ ಮಾದರಿ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

ವಿಜ್ಞಾನ ಮಾದರಿಯ ವಸ್ತುಗಳ ಪ್ರದರ್ಶನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ,ಉಪಾಧ್ಯಕ್ಷರಾದ ತನುಜಾ ಮಸೂರಕರ, ಸದಸ್ಯರುಗಳು,ಪಾಲಕರು, ಪೋಷಕರು,ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಮತ್ತು ಸಂಶೋಧನಾ ಕೌಶಲಗಳನ್ನು ಉತ್ತೇಜಿಸುವ ಒಂದು ಪ್ರಮುಖ ಶೈಕ್ಷಣಿಕ ವೇದಿಕೆಯಾಗಿದೆ. ಇದು ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕ ಮಾದರಿಗಳ ಮೂಲಕ ಪ್ರದರ್ಶಿಸಲು ಅವಕಾಶ ನೀಡುತ್ತದೆ.ವಿದ್ಯಾರ್ಥಿಗಳು ವಿಜ್ಞಾನ, ಗಣಿತ
ಮತ್ತು ತಂತ್ರಜ್ಞಾನದ ತತ್ವಗಳನ್ನು ಆಚರಣೆಯಲ್ಲಿ ಅನ್ವಯಿಸಲು ಕಲಿಯುತ್ತಾರೆ. ಹೊಸದನ್ನು ಕಂಡುಹಿಡಿಯುವ, ಆಲೋಚಿಸುವ ಮತ್ತು ವಿಮರ್ಶಿಸುವ ಕೌಶಲಗಳನ್ನು ಬೆಳೆಸುವುದು.ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿ ಮತ್ತು ಉತ್ಸಾಹವನ್ನು ಉತ್ತೇಜಿಸುವುದು.
ನೈಜ ಜೀವನದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಹಿಡಿಯುವುದು.ಒಟ್ಟಾರೆಯಾಗಿ, ವಿಜ್ಞಾನ ವಸ್ತು ಪ್ರದರ್ಶನಗಳು ಕೇವಲ ಪ್ರದರ್ಶನಗಳಲ್ಲ, ಬದಲಾಗಿ ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಾಗಿವೆ ಎಂದು ಹೇಳಿದರು. ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ಅವರು ಮಾತನಾಡಿ ಪಠ್ಯಪುಸ್ತಕದ ಕಲಿಕೆಯನ್ನು ಮೀರಿ,ತಾಂತ್ರಿಕ ಕೌಶಲ್ಯ, ಸಂಶೋಧನಾ ಮನೋಭಾವ ಮತ್ತು ಸಂವಹನ ಸಾಮರ್ಥ್ಯವನ್ನು ಬೆಳೆಸುತ್ತದೆ. ಅಲ್ಲದೆ, ಮೂಢನಂಬಿಕೆಗಳನ್ನು ತೊರೆದು, ನಿತ್ಯಜೀವನದ ಸಮಸ್ಯೆಗಳಿಗೆ ವಿಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಇದು ಪ್ರೇರೇಪಿಸುತ್ತದೆ.ವಿದ್ಯಾರ್ಥಿಗಳು ಸೈದ್ಧಾಂತಿಕ
ಪರಿಕಲ್ಪನೆಗಳನ್ನು ಪ್ರಾಯೋಗಿಕ ಮಾದರಿಗಳಾಗಿ ಪರಿವರ್ತಿಸುವುದರಿಂದ ವಿಷಯದ ಆಳವಾದ ತಿಳುವಳಿಕೆ ಮೂಡುತ್ತದೆ.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸಿ, ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ಅಥವಾ ತಂತ್ರಜ್ಞರಾಗಿ ಬೆಳೆಯಲು ಪ್ರೇರಣೆ ಆಗುತ್ತದೆ.ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು. ವಿಜ್ಞಾನ ಪ್ರಯೋಗಗಳು,
ಸೌರವ್ಯೂಹ ಮತ್ತು ಗ್ರಹಗಳು,
ಹುಣ್ಣಿಮೆ ಅಮಾವಾಸ್ಯೆಗಳ ಕಲ್ಪನೆ,ಐಬೆಕ್ಸ್ ನ ಬಗ್ಗೆ,ಮೂತ್ರಪಿಂಡ ,ರಕ್ತ ಪರಿಚಲನೆ,ಹಗಲು ಮತ್ತು ರಾತ್ರಿಗಳ ತಿಳುವಳಿಕೆ,ಹೃದಯ ಮತ್ತು ಬಡಿತ,ಶ್ವಾಸ ಕ್ರಿಯೆ,ಸಾಂದ್ರತೆ,ಬೆಳಕಿನ ಪ್ರತಿಫಲನ,ಮೋಜಿನ ವಿಜ್ಞಾನ ಕ್ಕಾಗಿ ಚಾವಿಯನ್ನು ತಂತಿಯ ಮೂಲಕ ಹಾಯಿಸುವುದು, ಗಣಿತ ವಿಷಯದ ಕೋನಗಳ ಮಾಹಿತಿ ಇತ್ಯಾದಿ ವಿಷಯಗಳ ಮಾದರಿಗಳ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ವಿವರಣೆಯನ್ನು ನೀಡುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು,ಪೋಷಕರು ಮಕ್ಕಳ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ವಿವರಣೆಯ ಬಗ್ಗೆ ಹಾಗೂ ಶಿಕ್ಷಕ ವೃಂದದವರ ಮಾರ್ಗದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.ಶಿಕ್ಷಕಿಯಾದ ವಿದ್ಯಾ ಮೇಡಂ ವಂದನೆಗಳನ್ನು ಸಲ್ಲಿಸಿದರು.