ಸುದ್ಧಿಕನ್ನಡ ವಾರ್ತೆ
Goa: ನೆರೆಹೊರೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ವಿರೋಧಿಸಿ ಹಾಗೂ ಸ್ವತಃ ತನ್ನ ಮನೆಯ ರಕ್ಷಣೆಗಾಗಿ ಗೋವಾದ ಸಾಂಗೆ ಮೂಲದ ಧನಗರ ಸಮಾಜದ (Dhanagar Samaj)  ಭೋಮಿ ಝೋರೆ ಎಂಬ ವಯೋವೃದ್ಧ ಮಹಿಳೆ ಪಣಜಿಯ ಆಜಾದ ಮೈದಾನದಲ್ಲಿ ಮೂಕ ಪ್ರತಿಭಟನೆ ಆರಂಭಿಸಿದ್ದಾರೆ. 75 ವರ್ಷದ ಈ ಮಹಿಳೆಗೆ ಸಾಮಾಜಿಕ ಕಾರ್ಯಕರ್ತರಾದ ರಾಮಾ ಕಾಣಕೋಣ ಸೇರಿದಂತೆ ಹಲವರು ಬೆಂಬಲ ನೀಡಿದ್ದಾರೆ. ಅಧಿಕಾರಿಗಳಾಗಿರುವ ನೆರೆಯವರ ವಿರುದ್ಧ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ವಯೋವೃದ್ಧೆ ಇದೀಗ ಆಜಾದ ಮೈದಾನದಲ್ಲಿ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ.

ಪ್ರತಿಭಟನಾ ನಿರತ ಭೋಮಿ ಝೋರೆ ಪ್ರತಿಕ್ರಿಯೆ ನೀಡಿ-ಕಳೆದ ಅನೇಕ ವರ್ಷಗಳಿಂದ ನೆರೆಯವರು ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮನೆಯನ್ನು ಕೆಡವಿಹಾಕಲು ಅಧಿಕಾರಿಗಳಿಂದ ನನಗೆ ಕಿರುಕುಳವಾಗುತ್ತಿದೆ. ನನ್ನ ಮಗಳ ವಿವಾಹವಾಗಿದೆ, ನಾನು ಮನೆಯಲ್ಲಿ ಒಬ್ಬಂಟಿಯಾಗಿದ್ದೇನೆ. ನನ್ನ ಮನೆಯನ್ನು ಉಳಿಸಿಕೊಳ್ಳಲು ನಾನು 2022 ರಲ್ಲಿ ನಾನು ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ಹಾಗೂ ಪಂಚಾಯತ ಅಧ್ಯಕ್ಷರಿಗೆ, ಸ್ಥಳೀಯ ಶಾಸಕರೂ ಸಚಿವರೂ ಆಗಿರುವ ಸುಭಾಷ ಫಳದೇಸಾಯಿ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇನೆ. ಆದರೆ ನೆರೆಯವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಲಿಸ್ ಠಾಣೆಯಲ್ಲಿ ದೂರು ನೀಡಿದರೂ ದೂರು ಸ್ವೀಕರಿಸಿಲ್ಲ ಎಂದು ಭೋಮಿ ಝೋರೆ ಅಳಲು ತೋಡಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ರಾಮಾ ಕಾಣಕೋಣಕರ್ ಮಾತನಾಡಿ- ಒಂದೆಡೆ ಸರ್ಕಾರ ಹಿರಿಯ ನಾಗರೀಕರಿಗೆ ಸೌಲಭ್ಯ ಒದಗಿಸುತ್ತದೆ. ಆದರೆ ಇಲ್ಲಿ ಧನಗರ ಸಮಾಜದ ಹಿರೀಯ ವೃದ್ಧ ಮಹಿಳೆಯ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಈ ಮಹಿಳೆಗೆ ನ್ಯಾಯ ಸಿಗುವ ವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದರು.