ಸುದ್ಧಿಕನ್ನಡ ವಾರ್ತೆ
Goa: ಕಳೆದ ನಾಲ್ಕು ವರ್ಷಗಳಲ್ಲಿ ಗೋವಾ ರಾಜ್ಯ ಕದಂಬ ಸಾರಿಗೆ ನಿಗಮವು (Goa Kadamba)ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ 5 ಲಕ್ಷದ 29 ಸಾವಿರದ 129 ರೂ. ದಂಡ ವಸೂಲಿ ಮಾಡಿದೆ. ಬಸ್ ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಲು ಕದಂಬ ಸಾರಿಗೆ ನಿಗಮದ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕದಂಬ ಸಾರಿಗೆಯ 81 ಸಾವಿರದ 644 ಬಸ್‍ಗಳನ್ನು ಪರಿಶೀಲಿಸಿದರು. ಕದಂಬ ಸಾರಿಗೆ ನಿಗವು ಬಿಡುಗಡೆ ಮಾಡಿರುವ ವರದಿಯಿಂದ ಈ ಮಾಹಿತಿ ಹೊರಬಿದ್ದಿದೆ.

ಆದಾಯ ಸೋರಿಕೆಯನ್ನು ತಡೆಯಲು ಕದಂಬ ಸಾರಿಗೆ ನಿಗಮವು ಹೆಚ್ಚಿನ ಪ್ರಯತ್ನ ನಡೆಸಿದೆ. ಇದರ ಭಾಗವಾಗಿ, ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸಲಾಗುತ್ತದೆ. ಇದರ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ತಿಂಗಳಿಗೆ ಸರಾಸರಿ 11 ಸಾವಿರ ಹಾಗೂ ವರ್ಷಕ್ಕೆ 1 ಲಕ್ಷ 32 ಸಾವಿರ ರೂ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಗೋವಾ ರಾಜ್ಯ ಕದಂಬ ಸಾರಿಗೆ ನಿಗಮವು ಮಾಹಿತಿ ನೀಡಿದೆ.

2023-24ನೇ ಹಣಕಾಸು ವರ್ಷದಲ್ಲಿ ಪಾಲಿಕೆಯಿಂದ ಅತಿ ಹೆಚ್ಚು ದಂಡದ ಮೊತ್ತ ಅಂದರೆ 1 ಲಕ್ಷದ 97 ಸಾವಿರದ 104 ರೂ. ವಸೂಲಿ ಮಾಡಲಾಗಿದೆ. ಇದು ಕಳೆದ ನಾಲ್ಕು ಹಣಕಾಸು ವರ್ಷಗಳಲ್ಲಿ ಸಂಗ್ರಹಿಸಿದ ಅತ್ಯಧಿಕ ದಂಡದ ಹಣವಾಗಿದೆ.

ಕದಂಬ ಸಾರಿಗೆ ನಿಗಮವು ಗೋವಾ ರಾಜ್ಯದ ವಿವಿಧ ಮಾರ್ಗಗಳಲ್ಲಿ ಓಡಾಟ ನಡೆಸುವ ಬಸ್‍ಗಳಲ್ಲಿ ಪ್ರಯಾಣಿಕರ ಟಿಕೇಟ್ ತಪಾಸಣೆ ನಡೆಸುತ್ತದೆ. ಇದರ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ತಿಂಗಳಿಗೆ ಸರಾಸರಿ 1700 ಬಸ್ ಗಳು ಅಂದರೆ ವರ್ಷಕ್ಕೆ ಸರಾಸರಿ 20 ಸಾವಿರದ 411 ಬಸ್ ಗಳ ತಪಾಸಣೆ ನಡೆಸಲಾಗಿದೆ. 2020-21ರಲ್ಲಿ ಗರಿಷ್ಠ 23 ಸಾವಿರದ 114 ಬಸ್‍ಗಳನ್ನು ತಪಾಸಣೆ ಮಾಡಲಾಗಿದೆ. 2021-22ರಲ್ಲಿ 18 ಸಾವಿರದ 958, 2022-23ರಲ್ಲಿ 18 ಸಾವಿರದ 629 ಹಾಗೂ 2023-24ರಲ್ಲಿ 20 ಸಾವಿರದ 943 ಬಸ್‍ಗಳನ್ನು ತಪಾಸಣೆ ಮಾಡಲಾಗಿದೆ.

ಈ ತಪಾದಣೆಯ ವೇಳೆ ಟಿಕೇಟ್ ಇಲ್ಲದೆಯೇ ಕದಂಬ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಯಾಣಿಕರಿಂದ 5 ಲಕ್ಷದ 29 ಸಾವಿರದ 129 ರೂ ದಂಡ ವಸೂಲಿ ಮಾಡಲಿದೆ ಎಂದು ಗೋವಾ ರಾಜ್ಯ ಕದಂಬ ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.