ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಪ್ರವಾಸಿಗರಿಗೆ ಸುರಕ್ಷತೆಯಿದೆಯೇ..? ಎಂಬ ಪ್ರಶ್ನೆ ಮತ್ತೆ ಎದುರಾಗಿದೆ. ಗೋವಾದ ಕಂದೋಳಿ ಬೀಚ್ ನಲ್ಲಿ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಪ್ರವಾಸಿ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಪಾರ್ವತಿ ಜೋಶಿ, ಡಾ.ರಾಹುಲ್ ಚೌಧರಿ,ಡಾ.ನರೇಂದ್ರ ಸಿಂಗ್ ಈ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೋಲಿಸರು ಇದುವರೆಗೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಬೆಚ್ಚಿ ಬೀಳುವಂತಾಗಿದೆ.

ಬೀಚ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ಘಟನೆ ನಡೆದಿದೆ. ಸದರಿ ಮಹಿಳೆಯನ್ನು ಕೆಲವು ಯುವಕರು ಚುಡಾಯಿಸುತ್ತಿದ್ದುದನ್ನು ಈ ವೈದ್ಯರು ವಿರೋಧಿಸಿದರು ಎನ್ನಲಾಗಿದೆ. ಇದರಿಂದಾಗಿ ಸುಮಾರು 15 ಜನರ ಗುಂಪು ಈ ವೈದ್ಯರು ಮತ್ತು ಮಹಿಳೆ ಸೇರಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಈ ಮೂವರು ಧರಿಸಿದ್ದ ಬಟ್ಟೆ ಕೂಡ ರಕ್ತದಲ್ಲಿ ಒದ್ದೆಯಾಗಿ ಹೋಗಿತ್ತು ಎನ್ನಲಾಗಿದೆ.

ಡಾ.ರಾಹುಲ್ ಚೌಧರಿ ಮತ್ತು ಡಾ.ನರೇಂದ್ರ ಸಿಂಗ್ ಈ ಇಬ್ಬರೂ ಪಶು ವೈದ್ಯರಾಗಿದ್ದಾರೆ. ಈ ವೈದ್ಯರು ಕಾಂದೋಳಿ ಬೀಚ್ ಗೆ ವಿಹಾರಕ್ಕೆ ಬಂದಿದ್ದರು. ಅಲ್ಲಿಯೇ ಇದ್ದ ಶಾಕ್ಸ ಹೋಟೆಲ್ ನಲ್ಲಿ ರಾತ್ರಿ ಊಟ ಮಾಡಿದ್ದಾರೆ. ಅಲ್ಲಿಯೇ ಇದ್ದ ಮಹಿಳೆಯ ಮೇಲೆ ಯುವಕರು ಚುಡಾಯಿಸುತ್ತಿದ್ದರು. ಮಹಿಳೆ ಮತ್ತು ಆ ಯುವಕರ ಗುಂಪಿನೊಂದಿಗೆ ಮಾತುಕತೆ ನಡೆಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಈ ಇಬ್ಬರು ಇದನ್ನು ವಿರೋಧಿಸಿದ್ದರಿಂದ ಯುವಕರ ಗುಂಪು ಈ ಮೂವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಗೋವಾದ ಕಲಂಗುಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಕೂಡಲೇ ತನಿಖಾ ಕಾರ್ಯ ಕೈಗೆತ್ತಿಕೊಂಡು ಜಿತೇಂದ್ರ ಸಿಂಗ್(24), ಭೂಪೇಂದ್ರ ಸಿಂಗ್ (24), ಅರುಣಕುಮಾರ್ (25), ಎಂಬ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಕಲಂಗುಟ್ ಪೋಲಿಸ್ ನಿರೀಕ್ಷಕ ಪರೇಶ್ ನಾಯ್ಕ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.