Banner Ad

ಸುದ್ದಿ ಕನ್ನಡ ವಾರ್ತೆ
​ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಜಿಲ್ಲೆಯ ಸರ್ವಪಕ್ಷ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರದ ಪ್ರಮುಖ ಸಚಿವರನ್ನು ಭೇಟಿ ಮಾಡಿ, ಬೇಡ್ತಿ-ಹಿರೇವಡ್ಡತ್ತಿ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳಿಂದ ಜಿಲ್ಲೆಯ ಪರಿಸರಕ್ಕಾಗುವ ಹಾನಿಯ ಕುರಿತು ಗಂಭೀರ ಚರ್ಚೆ ನಡೆಸಿತು.

ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್, ಪರಿಸರ ಸಚಿವ ಶ್ರೀ ಭೂಪೇಂದ್ರ ಯಾದವ್, ಕೇಂದ್ರ ಸಚಿವರುಗಳಾದ ಶ್ರೀ ಪ್ರಹ್ಲಾದ ಜೋಶಿ, ಶ್ರೀ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿದ ನಿಯೋಗವು, ಪಶ್ಚಿಮ ಘಟ್ಟಗಳ ರಕ್ಷಣೆ ಹಾಗೂ ಸ್ಥಳೀಯರ ನೀರಿನ ಭದ್ರತೆಯ ಬಗ್ಗೆ ವಿಸ್ತೃತ ಮನವಿ ಸಲ್ಲಿಸಿತು.

Banner Ad

​ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರೊಂದಿಗೆ ನಡೆದ ಸಭೆಯಲ್ಲಿ, ಜಿಲ್ಲೆಯ ಪರಿಸರ ಸೂಕ್ಷ್ಮತೆ ಮತ್ತು ಭಾರತೀಯ ವಿಜ್ಞಾನ ಮಂದಿರ ನೀಡಿರುವ ಜಿಲ್ಲೆಯ ಭಾರಧಾರಣಾ ಸಾಮರ್ಥ್ಯದ ವರದಿಯನ್ನು ನಿಯೋಗವು ಪ್ರಸ್ತಾಪಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನದಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಕೊರತೆ ಉಂಟಾದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ಒಪ್ಪಿಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಯೋಜನೆಗಳು ರಾಜ್ಯದ ವ್ಯಾಪ್ತಿಯಲ್ಲಿ ಇರುವುದರಿಂದ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಮೇಲಿದ್ದು, ಕೇಂದ್ರವು ಎಲ್ಲಾ ಸಂಶೋಧನಾ ವರದಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

​ನಂತರ ಪರಿಸರ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದಾಗ, ಅವರು ಪಶ್ಚಿಮ ಘಟ್ಟಗಳ ರಕ್ಷಣೆಗೆ ತಮ್ಮ ಪೂರ್ಣ ಬದ್ಧತೆಯನ್ನು ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳನ್ನು ಅತ್ಯುನ್ನತ ಆಧ್ಯಾತ್ಮಿಕ ಮತ್ತು ನೈಸರ್ಗಿಕ ತಾಣವೆಂದು ಬಣ್ಣಿಸಿದ ಸಚಿವರು, ಯಾವುದೇ ಅಭಿವೃದ್ಧಿ ಪರಿಹಾರಗಳು ಪ್ರಕೃತಿ ಆಧಾರಿತವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆ ಇದುವರೆಗೆ ಇಲಾಖೆಗೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಪ್ರಸ್ತಾವನೆ ಬಂದ ಸಂದರ್ಭದಲ್ಲಿ ನಿಯೋಗ ಮಂಡಿಸಿದ ಅಂಶಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
​ಪಶ್ಚಿಮ ಘಟ್ಟದ ಭಾರಧಾರಣಾ ಸಾಮರ್ಥ್ಯದ ಅಧ್ಯಯನ ಪೂರ್ಣಗೊಳ್ಳುವವರೆಗೆ ಯಾವುದೇ ವಿಸ್ತೃತ ಯೋಜನಾ ವರದಿ (DPR) ಚಟುವಟಿಕೆಗಳಿಗೆ ತಡೆ ನೀಡಬೇಕೆಂದು ನಿಯೋಗವು ಒತ್ತಾಯಿಸಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಮಂಕಾಳ ವೈದ್ಯ, ಶಾಸಕರುಗಳಾದ ಶ್ರೀ ಶಿವರಾಮ ಹೆಬ್ಬಾರ, ಶ್ರೀ ಭೀಮಣ್ಣ ನಾಯ್ಕ, ಶ್ರೀ ಶಾಂತಾರಾಮ ಸಿದ್ಧಿ, ಪರಿಸರ ತಜ್ಞ ಶ್ರೀ ಅನಂತ ಹೆಗಡೆ ಅಶಿಸರ ಹಾಗೂ ಪ್ರಮುಖರಾದ ಶ್ರೀ ನರಸಿಂಹ ಹೆಗಡೆ ಬಾಳೆಗದ್ದೆ, ವಿಜ್ಞಾನಿ ಶ್ರೀ ಭಾಲಚಂದ್ರ ಸಾಯಿಮನೆ ಮುಂತಾದವರು ಉಪಸ್ಥಿತರಿದ್ದರು.

Banner Ad