ಸುದ್ದಿ ಕನ್ನಡ ವಾರ್ತೆ
ಶಿರಸಿ:ರಾಜ್ಯದಲ್ಲಿಯೇ ಸುಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಿದ್ಧತೆಗಳ ಕುರಿತು ಅನೌಪಚಾರಿಕ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಜಾತ್ರಾ ಅವಧಿಯಲ್ಲಿ ನಗರದಲ್ಲಿ ಅತ್ಯಂತ ಬಿಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆಯ ಯಶಸ್ಸಿನಲ್ಲಿ ನೈರ್ಮಲ್ಯದ ಪಾತ್ರ ಮುಖ್ಯವಾಗಿದ್ದು, ನಗರದಾದ್ಯಂತ ಶಿಸ್ತುಬದ್ಧ ಸ್ವಚ್ಛತಾ ಕಾರ್ಯ ಹಾಗೂ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆದ್ಯತೆ ನೀಡಲು ತಿಳಿಸಿದರು. ಆರೋಗ್ಯದ ದೃಷ್ಟಿಯಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿರಸಿಯ ಈ ಐತಿಹಾಸಿಕ ಜಾತ್ರೆಯನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಶಿರಸಿ ನಗರಸಭೆಯ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರು ಸೇರಿದಂತೆ ನಗರದ ಪ್ರಮುಖರು ಉಪಸ್ಥಿತರಿದ್ದರು.
