ಸುದ್ದಿ ಕನ್ನಡ ವಾರ್ತೆ
ಬೆಂಗಳೂರು : ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರಿ ನೌಕರರು ಖಾದಿ ಬಟ್ಟೆಗಳನ್ನು ಧರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ.ಖಾದಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಬೇಕೆಂಬ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ಗುರುವಾರ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರು ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕೆಂಬ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪುರುಷರು ನೌಕರರು ಖಾದಿ ಬಟ್ಟೆ ಪ್ಯಾಂಟ್, ಶರ್ಟ್, ಓವರ್ ಕೋಟ್ ಧರಿಸಬೇಕು. ಮಹಿಳೆಯರು ರೇಷ್ಮೆ ಸೀರೆ, ಚೂಡಿದಾರ್ ಧರಿಸುವಂತೆ ಸೂಚನೆ ನೀಡಲಾಗಿದೆ.ಬರುವ ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಖಾದಿ ಬಟ್ಟೆಗಳನ್ನು ನೌಕರರು ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಖರೀದಿ ಮಾಡಬೇಕು. ಇದಕ್ಕೆ ಖಾದಿ ಗ್ರಾಮೋದ್ಯೋಗ ಮಂಡಳಿ ಈಗ ನೀಡುತ್ತಿರುವ ರಿಯಾಯಿತಿಗಿಂತ ಶೇ.5ರಷ್ಟು ಹೆಚ್ಚು ರಿಯಾಯಿತಿ ನೀಡಬೇಕು ಎಂದು ತೀರ್ಮಾನಿಸಲಾಗಿದೆ.
