ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ಜಾನಪದ ಕಲೆಯ ಉಳಿವಿಗಾಗಿ ಬಿ.ಎಸ್.ಗೌಡರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ ಬೆಂಗಳೂರು ಇವರು ಜಾನಪದ ಲೋಕ ಪ್ರಶಸ್ತಿ ‘ 2026 ಕ್ಕೆ ಬೀರಪ್ಪ ಗೌಡರನ್ನು ಆಯ್ಕೆಮಾಡಿರುವುದು ಹಾಲಕ್ಕಿ ಸಮಾಜಕ್ಕೆ ಒಲಿದ ಹೆಮ್ಮೆಯ ಕಿರೀಟ.
ಕುಮಟಾ ತಾಲೂಕಿನ ಭಾವಿಕೊಡ್ಲದ ಶ್ರಿಯುತರು ಬಾಲ್ಯದಿಂದಲೇ ಉತ್ತಮ ಯಕ್ಷಗಾನ ಕಲಾವಿದರು,ಅದ್ಭುತ ಮಾತುಗಾರರು,ಸಂಸ್ಕೃತ ಶ್ಲೋಕವನ್ನು ಹರಳು ಹುರಿದಂತೆ ಪಠಿಸುವ ಮಾಂತ್ರಿಕರು,ಇವರ ಮಾತು ಕೇಳೋಕೆ ಬಲು ಚೆಂದ.ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ಸಾಗಿಸುತ್ತಿರುವ ಇವರು ಸದ್ಯ ಹಾಲಕ್ಕಿ ಒಂಬತ್ತು ನುರಿತ ಯಕ್ಷ ಕಲಾವಿದರ ಕುರಿತಾದ ಸಮಗ್ರ ಮಾಹಿತಿಯ “ಹಾಲಕ್ಕಿ ಯಕ್ಷ ಕಲಾವಿದರು” ಎಂಬ ಕೃತಿಯನ್ನು ಹೊರತಂದು ಎಲ್ಲರ ಮೆಚ್ಚುಗೆ ಗಳಿಸಿರುತ್ತಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಸಂಸ್ಕೃತಿಯು ಶ್ರೀಮಂತ ಸಂಸ್ಕೃತಿ ಆಗಿದ್ದು ಯಕ್ಷಗಾನ, ಗುಮಟೆ ಪದ,ಸುಗ್ಗಿ ಕುಣಿತ,ಜಾನಪದ ಹಾಡು,ತಾರ್ಲೆ,ಮುಂತಾದ ಹಾಲಕ್ಕಿ ಸಂಸ್ಕೃತಿಯ ಉಳಿವಿಗಾಗಿ ಸದಾ ಹಂಬಲಿಸುತ್ತಿರುವ ಶ್ರೀಯುತರಿಗೆ ‘ ಜಾನಪದ ಲೋಕ ಪ್ರಶಸ್ತಿ 2026.’ ಲಭಿಸಿರುವುದು ಹಾಲಕ್ಕಿ ಸಮಾಜ ಸಂತಸ ಪಡುವ ವಿಷಯ.ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ರಾಮನಗರದ ಬಳಿಯಿರುವ ಜಾನಪದ ಲೋಕದಲ್ಲಿ 07 ಮತ್ತು 8 ನೇ ಫೆಬ್ರುವರಿ 2026 ರಂದು ಭಾನುವಾರ ನಡೆಯಲಿದ್ದು ಶ್ರೀಯುತರು ಫೆಬ್ರುವರಿ 8 ರಂದು ಭಾನುವಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
