ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ತಾಲೂಕಿನ ಕಾರ್ಟೋಳಿ ಮಾರ್ಗವಾಗಿ ಸಂಚರಿಸುವ ವಾಗೇಲಿ ವಸತಿ ಬಸ್ ಮಾರ್ಗ ಮಧ್ಯದಲ್ಲಿರುವ ಘಟ್ಟ ಪ್ರದೇಶದಲ್ಲಿ ಏರಲಾಗದೇ ಪ್ರಯಾಣಿಕರನ್ನು ಇಳಿಸಿ,ಹತ್ತಿಸುವ ಸಮಸ್ಯೆಯಿಂದ ಶಾಲಾ ಮಕ್ಕಳು,ವಯಸ್ಸಾದವರು,ಅನಾರೋಗ್ಯ ಪೀಡಿತರು ವಾಗೇಲಿ ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಉತ್ತಮ ನಿರ್ವಹಣೆ,ಗುಣಮಟ್ಟದ ಇಲ್ಲದ ಸರ್ಕಾರಿ ಬಸ್ ಸೇವೆ ಸಾರ್ವಜನಿಕರಿಗೆ, ವಿಶೇಷವಾಗಿ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಪ್ರಸ್ತುತ ವಾಗೇಲಿ ಕಡೆಗೆ ಸಂಚರಿಸುವ ಈ ಬಸ್ ಉತ್ತಮ ಸ್ಥಿತಿಯಲ್ಲಿ ಇಲ್ಲದ ಕಾರಣ, ಬಸ್ ಘಟ್ಟ ಹತ್ತಲು ಸಾಧ್ಯವಾಗದೆ ಸ್ವಲ್ಪ ಹಿಂದೆ ನಿಲ್ಲಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಬಸ್ಸಿನಿಂದ ಇಳಿದು ಕಾಲ್ನಡಿಗೆಯಲ್ಲೇ ಘಟ್ಟ ಹತ್ತಿ ಪ್ರಯಾಣ ಮುಂದುವರಿಸುವಂತಾಗಿದೆ. ಕಾಡು ಪ್ರದೇಶ, ಏರು ದಾರಿ ಹಾಗೂ ಅಪಾಯಕರ ಮಾರ್ಗವಾಗಿರುವುದರಿಂದ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಾರ್ಗದಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದು, ಅದರಲ್ಲಿ ಹೆಚ್ಚಿನವರು ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಗ್ರಾಮಸ್ಥರಾಗಿದ್ದಾರೆ. ಆದರೆ ಪ್ರಸ್ತುತ ಒಂದೇ ಒಂದು ಬಸ್ ಮಾತ್ರ ಸಂಚರಿಸುತ್ತಿರುವುದರಿಂದ ಹೆಚ್ಚಿನ ಪ್ರಯಾಣಿಕರಿಂದಲೂ ಹೆಚ್ಚಿನ ಸಮಸ್ಯೆ ಎದುರಾಗಿದೆ. ಈ ಹಿಂದೆ ಕಾರ್ಟೋಳಿಯಿಂದ ಜೋಯಿಡಾ ಮಾರ್ಗಕ್ಕೆ ಮತ್ತೊಂದು ಬಸ್ ಕಳುಹಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಹೆಚ್ಚುವರಿ ಬಸ್ ಸೇವೆ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಆದ್ದರಿಂದ ಉತ್ತಮ ಕಂಡಿಷನ್ ಇರುವ ಬಸ್‌ ನೇರವಾಗಿ ವಾಗೇಲಿ ಗ್ರಾಮಕ್ಕೆ ಕಳುಹಿಸಬೇಕು, ಜೊತೆಗೆ ಹೆಚ್ಚುವರಿ ಬಸ್‌ ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಗ್ರಾಮಸ್ಥರು ಹಾಗೂ ಪಾಲಕರು ಸಾರಿಗೆ ಇಲಾಖೆಯನ್ನು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.