ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಅವಧಿ ಮೀರಿದ ಮಾತ್ರೆ ನೀಡಿದ ವಿಚಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪರಿಣಾಮ, ಕಾರವಾರದ ಪಿಕಳೆ ನರ್ಸಿಂಗ್ ಹೋಂ ಫಾರ್ಮಸಿ ಇನ್‌ಚಾರ್ಜ್ ಆಗಿದ್ದ, ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ರಾಜು ಪಿಕಳೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾರವಾರ ತಾಲೂಕಿನ ವೈಲವಾಡ ಗ್ರಾಮದ ನಿವಾಸಿಗಳಾದ ಸುಭಾಷ ನಾಯ್ಕ ಹರಿಶ್ಚಂದ್ರ ನಾಯ್ಕ ಹಾಗೂ ಅನಿಲ ನಾಯ್ಕ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ವಿಡಿಯೋ ಹರಡಿದ ಹಿನ್ನೆಲೆ ಮತ್ತು ಉದ್ದೇಶದ ಕುರಿತು ತನಿಖೆ ಮುಂದುವರೆಸಿದ್ದಾರೆ.

ಮೂಲಗಳ ಪ್ರಕಾರ, ಕಳೆದ ಜ.7ರಂದು ಸುಭಾಷ ನಾಯ್ಕ ಹಾಗೂ ಇತರರು ಕಾರವಾರದಲ್ಲಿರುವ ಪಿಕಳೆ ಆಸ್ಪತ್ರೆಗೆ ತೆರಳಿ, ರೋಗಿಗೆ ಅವಧಿ ಮೀರಿದ ಔಷಧಿ ನೀಡಲಾಗಿದೆ ಎಂದು ಆರೋಪಿಸಿ ಆಸ್ಪತ್ರೆ ನೌಕರ ರಾಜು ಪಿಕಳೆ ಅವರೊಂದಿಗೆ ಗಲಾಟೆ ನಡೆಸಿದ್ದರು. ಈ ಸಂದರ್ಭ ಆಸ್ಪತ್ರೆಯೊಳಗಿನ
ಮಾತಿನ ಚರ್ಚೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಆಸ್ಪತ್ರೆ ಹಾಗೂ ಸಿಬ್ಬಂದಿ ವೃತ್ತಿಪರ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಆಗಿದ್ದರಿಂದ ಉಂಟಾದ ಮಾನಸಿಕ ಒತ್ತಡ ಮತ್ತು ಅವಮಾನ ಭಾವನೆಯೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಶುಕ್ರವಾರ ಅವರ ಮನೆಯಲ್ಲಿ ರಾಜು ಪಿಕಳೆ ತಮ್ಮನ್ನು ತಾವು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸುದ್ದಿ ತಿಳಿದ ಕೂಡಲೇ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.