ಸುದ್ಧಿಕನ್ನಡ ವಾರ್ತೆ
ಶಿರಸಿ: ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಲ್ಲಾಪುರ ರಸ್ತೆಯ ಚವತ್ತಿ-ಉಮ್ಮಚ್ಚಗಿ ಹೆದ್ದಾರಿಯ ಗೊರ್ಸಗದ್ದೆ ಸಮೀಪ ಖಾಸಗಿ ಬಸ್ಸೊಂದು (Ka-51, D-4325) ಚಾಲಕನ ನಿಯಂತ್ರಣ ತಪ್ಪಿ ಶನಿವಾರ ಬೆಳಿಗ್ಗೆ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಬಸ್ ನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.
ಇಂದು ಸಂಭವಿಸಿದ ಅಪಘಾತದಲ್ಲಿ ಖಾಸಗಿ ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ಗ್ರಾಮಸ್ಥರು ಧಾವಿಸಿ ಬಂದು ಗಾಯಾಳುಗಳನ್ನು ಬಸ್ನಿಂದ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ.
ಈ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬಸ್ನಲ್ಲಿ ಪ್ರಯಾಣಿಸುತ್ತಿದ್ದವರು ಮೈಸೂರಿನ ನಿವಾಸಿಗಳೆಂದು ತಿಳಿದುಬಂದಿದ್ದು,ಮಾಹಿತಿ ಪಡೆದ ಕೂಡಲೆ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
