ಸುದ್ದಿ ಕನ್ನಡ ವಾರ್ತೆ
ಚಾಮರಾಜನಗರ – ಭಾರತ ಆಧ್ಯಾತ್ಮಿಕ ನೆಲಗಟ್ಟಿನ ಮೇಲೆ ನಿಂತಿದೆ. ಪೂರ್ವಜರು ನಮಗೆ ಹಾಕಿಕೊಟ್ಟ ಜೀವನ ಸಂಪ್ರದಾಯ ಕಾನೂನು ಕಟ್ಟಳೆಗಳು, ಆಚರಣೆಗಳು ಪೂಜೆ ಪುನಸ್ಕಾರ ಪದ್ಧತಿಗಳು ವೈಜ್ಞಾನಿಕವಾಗಿ ಕೂಡಿದ್ದು, ಸಂಕ್ರಾಂತಿಯ ಆಚರಣೆ, ಪ್ರಕೃತಿ ಪಶುಸಂಪತ್ತು ಆಹಾರ ಧಾನ್ಯಗಳಿಗೆ ಕೃತಜ್ಞತೆ ಸಲ್ಲಿಸುವ ಮಹೋತ್ಸವವಾಗಿದೆ ಎಂದು ರಾಜಯೋಗ ಶಿಕ್ಷಣ ತಜ್ಞೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅಭಿಪ್ರಾಯಪಟ್ಟರು.
ಅವರು ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ದ ಮಕರ ಸಂಕ್ರಾಂತಿಯ ಆಧ್ಯಾತ್ಮಿಕ ಮೌಲ್ಯಗಳ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು.
ಎಳ್ಳಿನಂತೆ ಶುದ್ಧವಾದಂತ ಜೀವನ, ಬೆಲ್ಲದಂತೆ ಸಿಹಿಯಾದಂತ ಮಾತು ಪ್ರತಿಯೊಬ್ಬರಿಗೂ ಸುಖ ಕೊಡುವಂತದ್ದಾಗಿದೆ. ಉಪಕಾರ ಮಾಡಿದವರ ಸ್ಮರಣೆ ನಮನ ಕೃತಜ್ಞತೆ ಮಾಡುವುದಾಗಿದೆ. ಆದರೆ ಇಂದು ಎಲ್ಲೆಲ್ಲೂ ವೈರತ್ವ ಕ್ರೌರ್ಯ ಅಶಾಂತಿ ದುರಾಸೆ ದುರಳತನ ದುರಾಲೋಚನೆ ದುರ್ಬುದ್ಧಿ ಸ್ವಾರ್ಥ ಅಹಂಕಾರ ತಾಂಡವಾಡುತ್ತಿದೆ. ಉಪಕಾರ ಮಾಡಿದವರ ಮೇಲೆ ಅಪಕಾರ ಮಾಡುವವರೇ ಹೆಚ್ಚು ಇದ್ದಾರೆ. ದನ ಕರುಗಳು ಎಷ್ಟು ಉಪಕಾರ ಮಾಡುತ್ತವೆ ಆದರೆ ನರ ಮಾನವ ಭಿಕಾರಿಯಾಗಿ ಹೊಟ್ಟೆಗೆ ತಿನ್ನಲು ಇನ್ನೇನು ಇಲ್ಲ ಎಂದು ಅದನ್ನೇ ಕಡಿದು ತಿನ್ನುವಷ್ಟು ಕ್ರೂರಿ ಆಗಿದ್ದಾನೆ. ಪ್ರಾಣಿ ಭಕ್ಷಕನಾಗಿದ್ದಾನೆ ಇವನನ್ನು ರಾಕ್ಷಸ ಎನ್ನ ಬೇಕೋ? ಸುಧಾರಿತ ನಾಗರೀಕ ಮಾನವ ಎನ್ನ ಬೇಕೋ? ಸಂಬಂಧಗಳು ಹಾಳಾಗುತ್ತಿದೆ. ಇದೇ ಭಾರತದಲ್ಲಿ ಒಂದು ಕಾಲದಲ್ಲಿ ಹುಲಿ ಹಸು ಒಂದೇ ದಡದಲ್ಲಿ ನೀರನ್ನು ಕುಡಿಯುತ್ತಿದ್ದವು. ಹಾಲು ತುಪ್ಪದ ನದಿ ಹರಿಯುತ್ತಿತ್ತು ಚಿನ್ನದ ಪಕ್ಷಿ ಹಾರುತಿತ್ತು. ಯಥಾಮಹಾರಾಜಮಹಾರಾಣಿ ತಥಾ ಪ್ರಜಾ ಎಲ್ಲರೂ ಸಮಾನವಾಗಿದ್ದರು ಆದರೆ ಇಂದು ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯ ಅಸಮಾನತೆ ತಾಂಡವಾಡುತ್ತಿದೆ. ಮನುಷ್ಯ ಮನುಷ್ಯನ ನಡುವೆ, ಪ್ರಾಣಿ ಮನುಷ್ಯನ ನಡುವೆ, ಪ್ರಾಣಿ ಪ್ರಾಣಿಗಳ ನಡುವೆ,ಜಾತಿ ಜಾತಿ ನಡುವೆ, ಧರ್ಮ ಧರ್ಮಗಳ ನಡುವೆ, ದೇಶ ದೇಶಗಳ ನಡುವೆ, ಯುದ್ಧದ ಕಾರ್ಮೋಡಗಳು ಆವರಿಸಿಕೊಂಡಿದೆ ಎಂದು ವಿಷಾದಿಸಿದರು. ಕಲಿಯುಗವು ತನ್ನ ಚರಮ ಸೀಮೆಯನ್ನು ತಲುಪಿದ್ದು, ಕಲಿಯುಗವು ಸತ್ಯಯುಗವಾಗಿ ಪರಿವರ್ತನೆಯಾಗಲಿದೆ ಎಂದು ಭವಿಷ್ಯ ನುಡಿದರು. ಅನಂತರ ಎಲ್ಲರೂ ಪರಸ್ಪರದಲ್ಲಿ ಎಳ್ಳುಬೆಲ್ಲವನ್ನು ಹಂಚಿದರು. ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್ ನ ಬಿಕೆ ಆರಾಧ್ಯ, ಪುಟ್ಟ ಶೇಖರ ಮೂರ್ತಿ, ಶ್ರೀನಿವಾಸ್, ಸಿದ್ದಯ್ಯ,ಮಾಣಿಕ್ಯ, ಸತೀಶ್, ರಂಗನಾಥ್, ಅರ್ಜುನ್, ಸುನಿತಾ, ಜ್ಯೋತಿ, ಗೀತಾ, ಆಶಾ, ಲಕ್ಷ್ಮಿ ನರಸಿಂಹ ಪ್ರಸಾದ್, ರಘುನಾಥ್, ರಾಧಾ, ಮರುಗತಕ್ಕ, ನಿರ್ಮಲ, ಹಾಜರಿದ್ದರು
ಪ್ರಕೃತಿ ಪಶು ಸಂಪತ್ತು, ಆಹಾರ ಧಾನ್ಯ, ಕೃಷಿ ಉಪಕರಣಗಳಿಗೆ ಕೃತಜ್ಞತೆ ಸಲ್ಲಿಸುವುದೇ ಸತ್ಯ ಮಕರ ಸಂಕ್ರಾಂತಿ ಆಗಿದೆ
