ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೀರಾ…? ಹಾಗಿದ್ದರೆ ಖಡ್ಡಾಯವಾಗಿ ಕೂಡಲೇ ತಮ್ಮ ತಮ್ಮ ಸಂಪೂರ್ಣ ವಿವರದ ದಾಖಲಾತಿಯನ್ನು ಸ್ಥಳೀಯ ಪೋಲಿಸ್ ಠಾಣೆಗೆ ಸಲ್ಲಿಸಲು ಇನ್ನು ನಾಲ್ಕು ದಿನಗಳ ಕಾಲ ಸರ್ಕಾರ ಕೊನೇಯ ಕಾಲಾವಕಾಶ ನೀಡಿದೆ. ಇದಕ್ಕೆ ತಪ್ಪಿದಲ್ಲಿ 10,000 ರೂ ದಂಡ ಮತ್ತು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಗೋವಾ ಸರ್ಕಾರ ಎಚ್ಚರಿಕೆ ನೀಡಿದೆ.

ಗೋವಾ ರಾಜ್ಯದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಪೊಲೀಸರಿಗೆ ತಮ್ಮ ದಾಖಲಾತಿ ನೀಡಲು ಇಂದು ಕೊನೆಯ ದಿನವಾಗಿದ್ದರೂ, ಇನ್ನೂ ನೋಂದಣಿ ಮಾಡಿಸಿಕೊಳ್ಳದವರು ಮುಂದಿನ ನಾಲ್ಕು ದಿನಗಳಲ್ಲಿ ಆಯಾ ಸ್ಥಳೀಯ ಪೋಲಿಸ್ ಠಾಣೆಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಎಚ್ಚರಿಕೆ ನೀಡಿದ್ದಾರೆ.

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಮನೆ ಮಾಲೀಕರು ಮತ್ತು ಬಾಡಿಗೆದಾರರು ಪೋಲಿಸರಿಗೆ ಅಗತ್ಯ ದಾಖಲಾತಿ ಸಲ್ಲಿಸುವಲ್ಲಿ ಕಾಳಜಿ ವಹಿಸಬೇಕು. ಈ ವಿಷಯ ಇಬ್ಬರ ಹಿತದೃಷ್ಟಿಯಿಂದ ಕೂಡಿದ್ದು, ಹೊರ ರಾಜ್ಯಗದಿಂದ ಬರುವವರ ಸಂಪೂರ್ಣ ಮಾಹಿತಿ ಹಾಗೂ ವಿವರಗಳನ್ನು ಮಾಲೀಕರು ಹಾಗೂ ಪೊಲೀಸ್ ಠಾಣೆ ಬಳಿ ಹೊಂದಿರುವುದು ಅಗತ್ಯವಾಗಿದೆ. ಅದರಂತೆ ಈ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಾಡಿಗೆದಾರರಿಂದಲೇ ಹಲವು ಬಾರಿ ಕೊಲೆ, ವಂಚನೆ, ಕಳ್ಳತನ, ಕಳ್ಳತನ ಪ್ರಕರಣಗಳು ನಡೆದಿರುವುದರಿಂದ ಸರ್ಕಾರ ಕಟ್ಟುನಿಟ್ಟಿನ ನಿಲುವು ತಳೆದು ಶೇ.100ರಷ್ಟು ಬಾಡಿಗೆದಾರರ ನೋಂದಣಿ ಕಡ್ಡಾಯಗೊಳಿಸಿದೆ ಎಂದು ಮುಖ್ಯಮಂತ್ರಿ ಸಾವಂತ್ ಹೇಳಿದರು.

ಗೋವಾ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ,ಧರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವವರ ಸಂಪೂರ್ಣ ದಾಖಲಾತಿಯನ್ನು ಸ್ಥಳೀಯ ಪೋಲಿಸ್ ಠಾಣೆಗೆ ಖಡ್ಡಾಯವಾಗಿ ಸಲ್ಲಿಸುವಂತೆ ಸರ್ಕಾರ ಮನೆ ಮಾಲೀಕರಿಗೆ ಆದೇಶ ಹೊರಡಿಸಿದೆ. ಇದಕ್ಕೆ ತಪ್ಪಿದಲ್ಲಿ 10,000 ರೂ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ. ಈ ದಾಖಲಾತಿ ಸಲ್ಲಿಸಲು ಇನ್ನು ನಾಲ್ಕು ದಿನ ಮಾತ್ರ ಉಳಿದಿದೆ ಎಂದು ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.