ಸುದ್ಧಿಕನ್ನಡ ವಾರ್ತೆ
Goa: ಗೋವಾದ ಕೋಲ್ವಾಳ ಕಾರಾಗ್ರಹದಲ್ಲಿ ಗುರುವಾರ ಬೆಳಿಗ್ಗೆ ಖೈದಿಯೋರ್ವ ಸ್ಯಾನಿಟೈಜರ್ ಸೇವಿಸಿ ಮೈಮೇಲೂ ಸ್ಯಾನಿಟೈಜರ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಖೈದಿಯ ದೇಹ ಶೇ 50 ರಷ್ಟು ಸುಟ್ಟು ಹೋಗಿದೆ ಎನ್ನಲಾಗಿದ್ದು ಈತನನ್ನು ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂ ಗೆ ದಾಖಲಿಸಲಾಗಿದೆ.
ಈ ಘಟನೆ ಅಕ್ಟೋಬರ್ 10 ರಂದು ಬೆಳಿಗ್ಗೆ 11 ಘಂಟೆಗೆ ನಡೆದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಜೈಲ್ ಅಧಿಕಾರಿಗಳು ವಿಳಂಭ ಮಾಡಿದ್ದರಿಂದ ಖೈದಿಯ ಆರೋಗ್ಯ ಮತ್ತಷ್ಟು ಚಿಂತಾಜನಕವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೋಲ್ವಾ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಕಾರಾಗೃಹದಲ್ಲಿ ಅಧಿಕಾರಿಗಳಿಂದ ಉಂಟಾಗುತ್ತಿದ್ದ ಹಿಂಸೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಖೈದಿಗಳಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಖೈದಿ ರಾಜು ದಾಸ್ ಈತನಿಗೆ ಇಲ್ಲಿನ ದವಾಖಾನೆಯಲ್ಲಿ ಕೆಲಸ ನೀಡಲಾಗಿತ್ತು. ಇದರಿಂದಾಗಿ ಈತ ಬೇಸರಗೊಂಡಿದ್ದ ಎನ್ನಲಾಗಿದೆ. ಈ ಕೆಲಸ ನನಗೆ ಬೇಡ ಎಂದು ಜೈಲು ಅಧಿಕಾರಿಗಳಿಗೆ ಈ ಖೈದಿ ಹೇಳಿದ್ದ. ಗುರುವಾರ ಬೆಳಿಗ್ಗೆ ದವಾಖಾನೆಯಲ್ಲಿ ಖೈದಿಗಳ ತಪಾಸಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಈ ಖೈದಿಯು ಸ್ಯಾನಿಟೈಜರ್ ತೆಗೆದುಕೊಂಡು ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಸ್ಯಾನಿಟೈಜರ್ ಕುಡಿದು ಮೈಮೇಲೆ ಕೂಡ ಹಾಕಿಕೊಂಡು ಬೆಂಕಿ ಹಚ್ಚಿಕೊಂಡ ಎನ್ನಲಾಗಿದೆ. ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ಘಟನೆಯ ದೃಶ್ಯ ಸೆರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.