ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಅನೇಕ ವರ್ಷಗಳಿಂದ ಪ್ರತಿನಿತ್ಯದ ತರಕಾರಿ ಮತ್ತು ಕೃಷಿ ಉತ್ಪನ್ನಗಳಿಗಾಗಿ ಕರ್ನಾಟಕವನ್ನೇ ಅವಲಂಭಿಸಿದ್ದ ಗೋವಾ ರಾಜ್ಯ ಸರ್ಕಾರವು ತರಕಾರಿ ಬೆಳೆಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಗೋವಾ ರಾಜ್ಯವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಭಿಯಾಗಲು ಪ್ರಯತ್ನಿಸುತ್ತಿದೆ. ಗೋವಾ ರಾಜ್ಯದಲ್ಲಿ ತರಕಾರಿ ಕೃಷಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ, ಆದರೆ ಆದಾಯ ಕಡಿಮೆಯಾಗಿದೆ. ಮುಂಗಾರು ಬೆಳೆಗಳ ಕೃಷಿಯಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ. ಆದರೆ ಚಳಿಗಾಲದ ಋತುವಿನ ಬೆಳೆಗಳಲ್ಲಿ ಇಳಿಕೆ ಕಂಡುಬಂದಿದೆ. ಎರಡು ವರ್ಷಗಳಲ್ಲಿ, ಸಾಗುವಳಿ ಪ್ರದೇಶದಲ್ಲಿ 165 ಹೆಕ್ಟೇರ್‍ಗಳಷ್ಟು ಹೆಚ್ಚಳ ಕಂಡುಬಂದಿದೆ.

 

ಪ್ರಸಕ್ತ ಬಾರಿ ಗೋವಾ ರಾಜ್ಯದಲ್ಲಿ ತರಕಾರಿಗಳ ಬೆಳೆಯು 3,655 ಟನ್‍ಗಳಷ್ಟು ಕಡಿಮೆಯಾಗಿದೆ. ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, 2025 ರ ಮುಂಗಾರು ಋತುವಿನಲ್ಲಿ ಕೃಷಿ ಮತ್ತು ಆದಾಯ ಕಡಿಮೆಯಾಗಿದೆ. 2023 ರಿಂದ 2025 ರವರೆಗೆ, ಸ್ಥಳೀಯ ರೈತರು ಕರಗಲಕಾಯಿ, ಬೆಂಡೆಕಾಯಿ, ಕುಂಬಳಕಾಯಿ, ಬದನೆಕಾಯಿ, ಚಿಟ್ಕಿ, ಕೊತ್ತಂಬರಿ ಸೊಪ್ಪು , , ಮೂಲಂಗಿ, ಕೆಂಪು ಹರವೆ, ಹೀರೇಕಾಯಿ, ಜೋಳ, ಸೋಡಿಗೆ, ಪಾಲಕ್, ಮೆಂತೆ ಸೊಪ್ಪು ಮುಂತಾದ 2.58 ಲಕ್ಷ ಟನ್ ತರಕಾರಿಗಳನ್ನು ಉತ್ಪಾದನೆಯಾಗಿತ್ತು. 2024 ರಲ್ಲಿ, ಸಾಗುವಳಿ ಪ್ರದೇಶದಲ್ಲಿ ಹೆಚ್ಚಳ ಕಂಡುಬಂದಿದೆ; ಆದರೆ ಆದಾಯ ಕಡಿಮೆಯಾಗಿದೆ. 2023 ರಲ್ಲಿ, 8,698 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿಗಳನ್ನು ಬೆಳೆಸಲಾಯಿತು, ಆದರೆ 2024 ರಲ್ಲಿ, 8,863 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿಗಳನ್ನು ಬೆಳೆಸಲಾಯಿತು. 2023 ರಲ್ಲಿ, 1.14 ಲಕ್ಷ ಟನ್ ತರಕಾರಿಗಳನ್ನು ಉತ್ಪಾದಿಸಲಾಯಿತು, ಆದರೆ 2024 ರಲ್ಲಿ, 1.10 ಲಕ್ಷ ಟನ್ ಉತ್ಪಾದಿಸಲಾಯಿತು.

ಗೋವಾ ರಾಜ್ಯವು ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾದಲ್ಲಿ ಎಷ್ಟೇ ಪ್ರಮಾಣದಲ್ಲಿ ತರಕಾರಿ ಬೆಳೆದರೂ ಕೂಡ ಪ್ರತಿನಿತ್ಯ ಕರ್ನಾಟಕದ ಬೆಳಗಾವಿ ಸೇರಿದಂತೆ ಹಲವು ಟ್ರಕ್ ಗಳ ಮೂಲಕ ಪ್ರತಿನಿತ್ಯ ಗೋವಾಕ್ಕೆ ತರಕಾರಿ ಬರುತ್ತದೆ. ಗೋವಾದಲ್ಲಿ ಜನಸಂಖ್ಯೆ ಹಾಗೂ ಪ್ರವಾಸಿಗರ ಹೆಚ್ಚಳವೂ ಗೋವಾದಲ್ಲಿ ತರಕಾರಿ ಬೆಳೆ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದೇ ಹೇಳಲಾಗುತ್ತಿದೆ.

 

2025 ರ ಮುಂಗಾರು ಋತುವು ಕೊನೆಗೊಂಡು, ದ್ವಿದಳ ಧಾನ್ಯಗಳ ಋತುವು ನಡೆಯುತ್ತಿದೆ. 2024 ಕ್ಕೆ ಹೋಲಿಸಿದರೆ, 2025 ರ ಮುಂಗಾರು ಋತುವಿನಲ್ಲಿ ಸಾಗುವಳಿ ಪ್ರದೇಶವು 221 ಹೆಕ್ಟೇರ್ ಕಡಿಮೆಯಾಗಿದೆ ಎಂದು ದಾಖಲಾಗಿದೆ. ಉತ್ಪಾದನೆಯಲ್ಲಿ 4,021 ಟನ್‍ಗಳ ಇಳಿಕೆ ಕಂಡುಬಂದಿದೆ. 2023 ಮತ್ತು 2024 ರ ನಡುವೆ, ದ್ವಿದಳ ಧಾನ್ಯಗಳ ಕೃಷಿಯಲ್ಲಿ 61 ಹೆಕ್ಟೇರ್‍ನಿಂದ 3,807 ಟನ್‍ಗಳ ಹೆಚ್ಚಳ ಕಂಡುಬಂದಿದೆ. ದ್ವಿದಳ ಧಾನ್ಯಗಳ ಕೃಷಿಯಲ್ಲಿ 113 ಹೆಕ್ಟೇರ್ ಹೆಚ್ಚಳ ಕಂಡುಬಂದಿದೆ, ಆದರೆ ಉತ್ಪಾದನೆಯು 7,462 ಟನ್‍ಗಳ ಇಳಿಕೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.